ಕಾಸರಗೋಡು: ಎಸ್‌ಸಿ ವಿಭಾಗಗಳ ಸೌಲಭ್ಯಗಳನ್ನು ನಿಷೇಧಿಸುವುದರಲ್ಲಿ, ವಿಳಂಬಗೊಳಿಸುವುದರಲ್ಲಿ ವಿ.ಡಿ. ಸತೀಶನ್‌ರ ನೇತೃತ್ವದ ರಾಜ್ಯ ಸರಕಾರ ಪಿಣರಾಯಿ ವಿಜಯನ್‌ರ ಹಾದಿಯಲ್ಲೇ ಸಂಚರಿಸುತ್ತಿದೆ ಎಂದು ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸಿ. ಬಿನೀಶ್ ಮಾಸ್ತರ್ ನುಡಿದರು.
ಸ್ಕಾಲರ್‌ಶಿಪ್, ಸ್ಟೈಫಂಡ್ ಸಹಿತದ 37.7 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದು ಇದಕ್ಕೆ ಪುರಾವೆ ಎಂದು ಅವರು ನುಡಿದರು. ಎಸ್‌ಸಿ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಬಿಜೆಪಿ ಜಿಲ್ಲಾ ಕೇಂದ್ರವಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಆಯೋಜಿಸಿದ ಮಹಾತ್ಮಾ ಅಯ್ಯಂಗಾಳಿ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಿಎಸ್‌ಸಿ ರ‍್ಯಾಂಕ್ ಲಿಸ್ಟ್‌ನಲ್ಲಿ ಒಳಗೊಂಡ ಪರಿಶಿಷ್ಟ ಜಾತಿ ವಿಭಾಗದವರಲ್ಲಿ ಹೆಚ್ಚಿನವರಿಗೆ ನೇಮಕಾತಿ ಲಭಿಸದ ಸನ್ನಿವೇಶವಿದೆ. ಸರಕಾರಿ ಸಂಸ್ಥೆಗಳ ಎಸ್‌ಸಿ ಮೀಸಲಾತಿ ಹುದ್ದೆಗಳಲ್ಲಿ ತಾತ್ಕಾಲಿಕ ನೇಮಕಾತಿ ನಡೆಸಿ ಪರಿಶಿಷ್ಟ ಜಾತಿ ವಿಭಾಗಗಳನ್ನು ಎಡ-ಬಲ ಒಕ್ಕೂಟ ಸರಕಾರಗಳು ವಂಚಿಸುತ್ತಿವೆ ಎಂದು ಬಿನೀಶ್ ಆರೋಪಿಸಿದರು. ಮಹಾತ್ಮ ಅಯ್ಯಂಗಾಳಿಯವರ ಹೋರಾಟ ಸಮಾನತೆ, ಮಾನ್ಯತೆ, ಶಿಕ್ಷಣ, ಉದ್ಯೋಗ ಹಕ್ಕು ಎಂಬಿವುಗಳಿಗಾಗಿರುವ ಇತಿಹಾಸ ಪ್ರಸಿದ್ಧ ಹೋರಾಟಗಳಾಗಿತ್ತು. ಈಗ ರಾಜ್ಯದಲ್ಲಿ ಅಯ್ಯಂಗಾಳಿಯವರ ಸಾಮಾಜಿಕ ಪರಿಷ್ಕರಣೆ ಚಟುವಟಿಕೆಗಳನ್ನು ನೆನಪಿಸುವ ಏಕ ರಾಜಕೀಯ ಪಕ್ಷವೆಂದರೆ ಬಿಜೆಪಿ ಆಗಿದೆ ಎಂದು ಅವರು ನುಡಿದರು.
ಪರಿಶಿಷ್ಟ ಜಾತಿ ವಿಭಾಗಗಳ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಪ್ರತ್ಯೇಕ ಆಯೋಗ ರೂಪೀಕರಿಸಬೇಕು, ಪರಿಶಿಷ್ಟ ಜಾತಿ ಅಭಿವೃದ್ಧಿ ನೀತಿ ಘೋಷಿಸಬೇಕು, ಭೂರಹಿತರು, ವಸತಿರಹಿತರಾದವರಿಗೆ ಭೂಮಿ, ಮನೆ, ಶಿಕ್ಷಣ, ಉದ್ಯೋಗ ಎಂಬಿವು ಖಚಿತಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಎಸ್‌ಸಿ ಮೋರ್ಚಾ ಮುಂದಿರಿಸಿ ಮುಷ್ಕರಕ್ಕೆ ಮುಂದಾಗಲಿದೆ ಎಂದು ಅವರು ತಿಳಿಸಿದರು. ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ಪೆರಡಾಲ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಳ್ಕೂರು, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಶ್ರೀವಿದ್ಯಾ, ಸಂಪತ್ ಕುಮಾರ್ ಪೆರ್ನಡ್ಕ, ರಘು ಎಂ. ಮಾತನಾಡಿದರು.







