ಕಾಸರಗೋಡು: ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ಭೇಟಿಯಾಗಲು ತಲುಪಿದ ಸಂಬಂಧಿಕರೊಂದಿಗೆ ಅನುಚಿತವಾಗಿ ವರ್ತಿಸಿ, ಅವರ ಮೊಬೈಲ್ ಫೋನ್ ವಶಪಡಿಸಿ ನಾಶಗೊಳಿಸಿದ ಘಟನೆಗೆ ಸಂಬಂಧಿಸಿ ಕಾಸರಗೋಡು ನಗರ ಪೊಲೀಸ್ ಠಾಣೆಯ ಎಸ್.ಐ ಸೈಫುದ್ದೀನ್‌ರನ್ನು ತನಿಖಾ ವಿಧೇಯವಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕಣ್ಣೂರು ಡಿಐಜಿ ಕೆ. ಕಾರ್ತಿಕ್ ಈ ಕ್ರಮ ಕೈಗೊಂಡಿದ್ದಾರೆ. ಎಸ್‌ಐಯ ವರ್ತನೆಯಿಂದ ಸಾರ್ವಜನಿಕರು ಸಮಸ್ಯೆಗೊಳ ಗಾಗಿದ್ದು, ಅಲ್ಲದೆ ಪೊಲೀಸ್ ಸೇನೆಗೆ ಕಳಂಕ ಸೃಷ್ಟಿಸಿರುವುದಾಗಿ ಆರೋಪಿಸಿ ಎಸ್ ಐ ವಿರುದ್ಧ ವರದಿ ಸಲ್ಲಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಎಸ್‌ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಗೆ ನಿರ್ದೇಶ ನೀಡಲಾಗಿದೆ. ಈ ತಿಂಗಳ 23ರಂದು ಘಟನೆ ನಡೆದಿದೆ.
ಉಜಿರೆಕೆರೆ ಎಂಬಲ್ಲಿ ಇಬ್ಬರನ್ನು ಅಪಹರಣಗೈದ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ತೆಗೆದು ಕಾಸರಗೋಡು ನಗರ ಠಾಣೆಗೆ ತಲುಪಿಸಲಾಗಿತ್ತು. ಈ ವಿಷಯ ತಿಳಿದು ಆರೋಪಿಗಳ ಹೆತ್ತವರು ಹಾಗೂ ಪತ್ನಿ ಸಹಿತ ಸಂಬಂಧಿಕರು ಠಾಣೆಗೆ ತಲುಪಿ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ಅವರೊಂದಿಗೆ ವಾಗ್ವಾದ ನಡೆಸಿ ಹೊರಗೆ ಹೋಗುವಂತೆ ಪೊಲೀಸರು ತಿಳಿಸಿದ್ದಾರೆ. ಬಳಿಕ ಮಹಿಳಾ ಪೊಲೀಸ್‌ನ ಸಹಾಯದೊಂದಿಗೆ ಆರೋಪಿಗಳ ಪೈಕಿ ಓರ್ವನ ತಾಯಿ ಹಾಗೂ ಪತ್ನಿಯನ್ನು ಠಾಣೆಯಿಂದ ಹೊರಹಾಕಲಾಯಿತು. ಈ ದೃಶ್ಯವನ್ನು ಇನ್ನೋರ್ವ ಮಹಿಳೆ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದಾಗ ಎಸ್‌ಐ ಸೈಫುದ್ದೀನ್ ಅವರ ಕೈಯಿಂದ ಫೋನ್ ಬಲವಂತವಾಗಿ ವಶಪಡಿಸಿ ನಾಶಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಫೋನ್ ವಶಪಡಿಸಿ ಅವರೊಂದಿಗೆ ಅನುಚಿತವಾಗಿ ವರ್ತಿಸಿ ನಿಂದಿಸಿರುವುದಾಗಿ ದೂರಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸ್ ಠಾಣೆಯ ಸಿಸಿ ಟಿವಿ ದೃಶಗಳನ್ನು ಪರಿಶೋಧಿಸಿ ಡಿಐಜಿಗೆ ವರದಿ ಸಲ್ಲಿಸಿದ್ದರು.






