ಕಾಸರಗೋಡು: ರೈಲಿನಲ್ಲಿ ಪ್ರಯಾಣಿಕನ ಐಪ್ಯಾಡ್, ಮೊಬೈಲ್ ಫೋನ್ ಇತ್ಯಾದಿ ಸಾಮಗ್ರಿಗಳನ್ನು ಕಳವುಗೈದ ಆರೋಪಿಯನ್ನು ಘಟನೆ ನಡೆದ 24 ತಾಸುಗಳೊಳಗಾಗಿ ಬಂಧಿಸುವಲ್ಲಿ ಕಾಸರಗೋಡು ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ನಿವಾಸಿ ಬರೇದ್ರ ರಾವುತ್ತರ್ (37) ಬಂಧಿತ ಆರೋಪಿ. ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್.ಐ. ಸನಿಲ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.
ಮಂಗಳೂರಿನಿಂದ ಕಾಸರ ಗೋಡಿನತ್ತ ಬರುತ್ತಿದ್ದ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ರಾತ್ರಿ ವೇಳೆ ಈ ಕಳವು ನಡೆದಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಮಲಪ್ಪುರಂ ಇರುಂಬುಳ ವಡಕ್ಕೆಮುರಿಯ ಪಿ. ಸನೂಪ್ ರಹ್ಮಾನ್ ಎಂಬವರ 89000 ರೂ. ಮೌಲ್ಯದ ಐ-ಪ್ಯಾಡ್, ಮೊಬೈಲ್ ಫೋನ್, ಪವರ್ ಬ್ಯಾಂಕ್ ಇತ್ಯಾದಿಗಳು ಒಳಗೊಂಡ ಬ್ಯಾಗನ್ನು ರಾತ್ರಿ ವೇಳೆ ಕಳವುಗೈಯ್ಯಲಾಗಿತ್ತು. ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದಾಗಲಷ್ಟೇ ಕಳವು ನಡೆದಿರುವುದು ಸನೂಪ್‌ರ ಗಮನಕ್ಕೆ ಬಂದಿದೆ. ಕೂಡಲೇ ಅವರು ಆ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಪೊಲೀಸರು ಸಿಸಿಟಿವಿ ದೃಶ್ಯ ಇತ್ಯಾದಿಗಳನ್ನು ಪರಿಶೀಲಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಕೃಪೇಶ್, ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಅಬ್ದುಲ್ ಸತ್ತಾರ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು. ಆರೋಪಿಯನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಯಿತು.






