ಎಂಡಿಎಂಎ ಸಾಗಾಟ: ಅಂತಾರಾಷ್ಟ್ರೀಯ ಮಾದಕದ್ರವ್ಯ ದಂಧೆಯ ವಿದೇಶಿ ಪ್ರಜೆ ಸೇರಿದಂತೆ ಇಬ್ಬರ ಸೆರೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಿಂದ ಇತ್ತೀಚೆಗೆ ಪೊಲೀಸರು ೧೩೯.೨೯ ಗ್ರಾಂ ಮಾದಕದ್ರವ್ಯವಾದ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಘಾನಾ ನಿವಾಸಿ ವಿಕ್ಟರ್ ದಸಾಬೆ (37) ಹಾಗೂ ಗುಜರಾತ್ ಅಹಮ್ಮದಾಬಾದ್ ಲ್ಯಾಂಬ ನಿವಾಸಿ ಹಾಗೂ ಈಗ ಪಶ್ಚಿಮ ಬಂಗಾಳ ಹೌರ ಜಿಲ್ಲೆಯ ನರೇಂದ್ರ ಪುಟ್‌ನಲ್ಲಿ ವಾಸಿಸುತ್ತಿರುವ ರಿಯಾಖಾನ್ ಅಲಿಯಾಸ್ ಸಾಥಿ ಶೇಖ್ (31) ಬಂಧಿತ ಆರೋಪಿಗಳು. ಇವರನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನಿತಿನ್‌ರಾಜ್‌ರ ಮೇಲ್ನೋಟದಲ್ಲಿ ಡಿವೈಎಸ್‌ಪಿ ಅನಿಲ್ ಕುಮಾರ್ ಎಂ.ವಿ.ಯವರ ನೇತೃತ್ವದ ೧೭ ಮಂದಿ ಪೊಲೀಸರನ್ನೊಳಗೊಂಡ ವಿಶೇಷ ತನಿಖಾ ತಂಡ ಬಂಧಿಸಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಅರಯಪ್ಪಾಡಿ ಪೂಮರಂ ವೆಸ್ಟ್ ವೇಂಙಾಳ ನಿವಾಸಿ ಪಿ.ಎಂ. ಅಬ್ದುಲ್ ಸಲಾಂ (27), ಕುರುವಳ್ಳಿ ವೀಟಿಲ್ ಕೆ.ಎಚ್. ಮೊಹಮ್ಮದ್ ಹುಸೈನ್ (28), ಪಾರಾಪುರತ್ ಪುತ್ತನ್ ಪುರೈಕಲ್ ಪಿ.ಎ. ಅಬ್ಬಾಸ್, ಎಲಿಂಜಿಕಲ್ ವೀಟಿಲ್ ಇ.ಎಸ್. ಸೈನುಲಾಬಿದಿನ್ (42) ಮತ್ತು ಹೊಸದುರ್ಗ ಅಂಬಲತ್ತರ ಬೇಳೂರು ಪಾರಾಪಳ್ಳಿಯ ಕೆ. ಮೊಹಮ್ಮದ್ ಸಾಬಿರ್ (39) ಎಂಬವರನ್ನು ಪೊಲೀ ಸರು ಈ ಹಿಂದೆ ಬಂಧಿಸಿದ್ದರು. ಈಗ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸುವ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳ ಸಂಖ್ಯೆ 7ಕ್ಕೇರಿದೆ. ಬಂಧಿತರ ಪೈಕಿ ವಿಕ್ಟರ್ ದಸಾಬೆ ಅಂತಾರಾಷ್ಟ್ರೀಯ ಮಾದಕದ್ರವ್ಯ ಸಾಗಾಟದ ಪ್ರಧಾನ ಕೊಂಡಿಗಳಲ್ಲೋರ್ವನಾಗಿದ್ದಾನೆ. ರಿಯ ಖಾನ್ ಕೇರಳದಲ್ಲಿ ಮಾದಕದ್ರವ್ಯ ಸಾಗಾಟ ದಂಧೆಯ ಪ್ರಧಾನ ಕೊಂಡಿ ಯಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ  ನ್ಯಾಯಾಲಯದ ಅನುಮತಿಯೊಂದಿಗೆ ಈ ಇಬ್ಬರು ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು  ತೀವ್ರ ವಿಚಾರಣೆಗೊಳಪಡಿಸಲು ತೀರ್ಮಾನಿಸಿದ್ದಾರೆ. ಬಂಧಿತ ಆರೋಪಿಗಳಿಗೆ ಮಾದಕದ್ರವ್ಯ ಪೂರೈಸುವ ಪ್ರಧಾನ ವ್ಯಕ್ತಿಯಾಗಿದ್ದಾನೆ ವಿಕ್ಟರ್ ದಸಾಬೆ ಎಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸ್‌ರ ತಂಡದಲ್ಲಿ ನೀಲೇಶ್ವರ ಇನ್ಸ್‌ಪೆಕ್ಟರ್ ಪ್ರಶಾಂತ್ ಕೆ, ಹೊಸದುರ್ಗ ಸಬ್ ಇನ್ಸ್‌ಪೆಕ್ಟರ್ ನೀತು ತಚ್ಚಂಜೇರಿ, ಇತರ ಪೊಲೀಸರಾದ ರಮೇಶನ್ ಎನ್.ಎಂ (ಎಎಸ್‌ಐ), ಸನೀಶ್ ಕುಮಾರ್ ಎ, ಅನಿಲ್ ಕೆ.ಟಿ, ಜ್ಯೋತಿಷ್ (ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್), ಸಿಪಿಒಗಳಾದ ನಿಖಿಲ್ ಕುಮಾರ್ ಎಂ, ರಾಹುಲ್, ಕುಂಞಿಕೃಷ್ಣನ್ ಹಾಗೂ ಜಯೇಶ್ ಎಂಬವರು ಒಳಗೊಂಡಿದ್ದಾರೆ.

RELATED NEWS

You cannot copy contents of this page