ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದು ಕಾರು ಸಹಿತ ತಂಡ ಪರಾರಿ

ಕುಂಬಳೆ: ಬಂದ್ಯೋಡಿನಲ್ಲಿ ವ್ಯಾಪಾರಿಯನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಳಿಕ ಅವರ ಕಾರನ್ನು ತಂಡ ಅಪಹರಿಸಿರುವುದಾಗಿ ದೂರಲಾಗಿದೆ.  ವ್ಯಾಪಾರಿಯ ಐಫೋನ್‌ನ್ನು ತಂಡ ಕಸಿದುಕೊಂಡಿದೆ.  ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ಸಂಸ್ಥೆ ನಡೆಸುವ ಮಳ್ಳಂಗೈಯ ಅಲಿ ಮುಕ್ತಾದ್ (34)ರ ಮೇಲೆ ತಂಡ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಿನ್ನೆ ಸಂಜೆ  ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನದ ಸಮೀಪ ಘಟನೆ ನಡೆದಿದೆ. ಅಲಿ ಮುಕ್ತಾದ್ ಬಂದ್ಯೋಡಿನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು.ಗುರ್ಮೆಗೆ ತಲುಪಿದಾಗ ಮೂರು ಮಂದಿ ತಂಡ ಕಾರನ್ನು ತಡೆದು ನಿಲ್ಲಿಸಿ 50 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದೆ. ಆದರೆ ಹಣ ನೀಡಲು  ಅಲಿ ಮುಕ್ತಾದ್ ಸಿದ್ಧರಾಗದಿದ್ದಾಗ ಅವರನ್ನು ಕಾರಿನಿಂದ ಎಳೆದು ಹೊರಗೆ ಹಾಕಿ ಹಲ್ಲೆಗೈದ ಬಳಿಕ ತಂಡ ಕಾರು ಹಾಗೂ ಐಫೋನ್ ಕಸಿದು ಪರಾರಿಯಾಗಿದೆಯೆಂದು ದೂರಲಾಗಿದೆ. ಆನಂತರ ಆ ರಸ್ತೆಯಲ್ಲಿ ಬಂದ ವಾಹನ ಪ್ರಯಾಣಿಕರು ಅಲಿ ಮುಕ್ತಾದ್‌ರನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ  ಗಂಭೀರ ಗಾಯಗೊಂಡಿರುವುದರಿಂದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊ ಯ್ಯಲಾಯಿತು. ಹಲವು ಪ್ರಕರಣ ಗಳಲ್ಲಿ ಆರೋಪಿಯಾದ ಶಂಸೀರ್, ಅಯಾಸ್ ಹಾಗೂ ಕಂಡರೆ ಪತ್ತೆ ಹಚ್ಚಬಹುದಾದ ಇನ್ನೋರ್ವ ಸೇರಿ ಹಲ್ಲೆಗೈದು ಕಾರನ್ನು ಅಪಹರಿಸಿರುವುದಾಗಿ ಅಲಿ ಮುಕ್ತಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page