ಕಾಸರಗೋಡು: ತೈಕಡಪ್ಪುರದ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನಾಪತ್ತೆಯಾದ ಅಜ್ಮಲ್ ಎಂಬ ಯುವಕನ ಮೃತದೇಹ ಪತ್ತೆಯಾಗಿದೆ. ತೈಕಡಪ್ಪುರದಿಂದ ಇಂದು ಬೆಳಿಗ್ಗೆ ಮೀನುಗಾರಿಕೆಗಾಗಿ ಹೋದ ಮೀನು ಕಾರ್ಮಿಕರು ಅಳಿವೆ ಬಾಗಿಲು ಸಮೀಪ ಸಮುದ್ರದಲ್ಲಿ ತೇಲುತ್ತ್ತಿದ್ದ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ವಿಷಯವನ್ನು ಕರಾವಳಿ ಪೊಲೀಸರಿಗೆ ತಿಳಿಸಲಾಯಿತು. ಪೊಲೀಸರ ನಿರ್ದೇಶ ಪ್ರಕಾರ ಮೀನು ಕಾರ್ಮಿಕರು ತಮ್ಮ ಬೋಟ್ನಲ್ಲಿ ಮೃತದೇಹವನ್ನು ದಡಕ್ಕೆ ತಲುಪಿಸಿದ್ದಾರೆ. ಮೃತದೇಹವನ್ನು ಕಾಞಂಗಾಡ್ನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಕಳೆದ ಶನಿವಾರ ಸಂಜೆ ತೈಕಡಪ್ಪುರ ಸ್ಟೋರ್ ಕವಲ ಎವಿ ಹೌಸ್ನ ಎ.ವಿ. ಅಜ್ಮಲ್ ಸಮುದ್ರ ದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿ ನಾಪತ್ತೆಯಾ ಗಿದ್ದರು. ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಫಿಶರೀಸ್ ಹಾಗೂ ಕರಾವಳಿ ಪೊಲೀಸ್ನ ರಕ್ಷಣಾ ಬೋಟ್ಗಳ ಮೂಲಕ ಸಮುದ್ರದಲ್ಲಿ ಹುಡುಕಾಟ ನಡೆಸಿದರೂ ಅಜ್ಮಲ್ರನ್ನು ಪತ್ತೆಹಚ್ಚಲಾಗಿರಲಿಲ್ಲ. ಅಜ್ಮಲ್ ತೈಕಡಪ್ಪುರ ಸೀರೋಡ್ ಕಡಪ್ಪುರದಲ್ಲಿ ವಾಸಿಸುವ ಕಾಲಿಚ್ಚಾನಡ್ಕದ ಹನೀಫ ಹಾಗೂ ರಹ್ಮತ್ ದಂಪತಿಯ ಪುತ್ರನಾಗಿದ್ದಾರೆ.






