ಮಂಜೇಶ್ವರ: ವಾಮಂಜೂರು ಚೆಕ್ ಪೋಸ್ಟ್ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿಬಿದ್ದು ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ. ಕರ್ನಾಟಕದ ಬೆಳ್ತಂಗಡಿ ನಿವಾಸಿಯೂ ಮಂಗಳೂರಿನಲ್ಲಿ ಕೆಫೆ ನೌಕರನಾಗಿರುವ ಬಾತಿಷ (25) ಮೃತಪಟ್ಟ ದುರ್ದೈವಿ. ಇಂದು ಮುಂಜಾನೆ 3 ಗಂಟೆಗೆ ವಾಮಂಜೂರು ಚೆಕ್ ಪೋಸ್ಟ್ ಟರ್ಫ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವುಂಟಾಗಿದೆ. ಸ್ನೇಹಿತನೊಂದಿಗೆ ಕಾಸರಗೋಡು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಸ್ಕಿಡ್ ಆಗಿ ಡಿವೈಡರ್ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಬಾತಿಷರನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಜತೆಗಿದ್ದ ಸ್ನೇಹಿತ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ. ಅಪಘಾತ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೊಯ್ನುದ್ದೀನ್-ನಬೀಸ ದಂಪತಿಯ ಪುತ್ರನಾದ ಮೃತರು ಸಹೋದರ ಅಬ್ದುಲ್ ಬಾಯಿಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






