ಕಾಸರಗೋಡು: ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್‌ನ ಜಿಲ್ಲಾ ಸಮ್ಮೇಳನ ನಾಳೆ ಹೊಸದುರ್ಗದ ಮುನ್ಸಿಪಲ್ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದೆ. ಫೆಡರೇಶನ್‌ನ ಜಿಲ್ಲಾಧ್ಯಕ್ಷ ಕೆ. ಗಿರೀಶ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸು ವರು. ಹೊಸದುರ್ಗ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಫೆಡರೇಶನ್‌ನ ರಾಜ್ಯಾಧ್ಯಕ್ಷ ಕೆ.ಕೆ. ಥೋಮಸ್ ಪ್ರಧಾನ ಭಾಷಣಗಾರ ರಾಗಿರುವರೆಂದು ಈ ಪ್ರಯುಕ್ತ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಫೆಡರೇಶನ್‌ನ ಜಿಲ್ಲಾಧ್ಯಕ್ಷ ಕೆ. ಗಿರೀಶ್, ಕಾರ್ಯದರ್ಶಿ ಕೆ. ಲಕ್ಷ್ಮಣನ್, ಸಿ.ಎ.ಮೊಹಮ್ಮದ್ ಕುಂಞಿ, ಕಾರ್ತಿಕ್‌ರಾಜ್, ರಾಧಾಕೃಷ್ಣ ಎಸ್, ರಾಜೇಶ್ ಯು ಮತ್ತು ರತ್ನಾಕರ ಆಳ್ವ ತಿಳಿಸಿದ್ದಾರೆ.
ಖಾಸಗಿ ಬಸ್ ಉದ್ದಿಮೆ ಕಳೆದ 20 ವರ್ಷಗಳಿಂದ ಭಾರೀ ಸಂಕಷ್ಟದಲ್ಲಿ ಸಾಗುತ್ತಿದ್ದು, ಈ ಹಿಂದೆ ೩೫ ಸಾವಿರವಿದ್ದ ಖಾಸಗಿ ಬಸ್‌ಗಳ ಸಂಖ್ಯೆ ಈಗ ೧೧ ಸಾವಿರಕ್ಕಿಳಿದಿದೆ. ಅವೈಜ್ಞಾನಿಕ ರೀತಿಯ ಸಮಯಾವಳಿ, ಕೆಎಸ್‌ಆರ್‌ಟಿಸಿಗೆ ನೀಡಲಾಗುತ್ತಿರುವ ಅಮಿತ ಪರಿಗಣನೆ, ರಾಷ್ಟ್ರೀಕರಣದ ಕೊರತೆ, ವಿದ್ಯಾರ್ಥಿ ಗಳಿಗೆ ಕನಿಷ್ಠ ದರ ಇತ್ಯಾದಿಗಳೇ ಖಾಸಗಿ ಬಸ್ ವಲಯ ನಷ್ಟದತ್ತ ಸಾಗಲು ಪ್ರಧಾನ ಕಾರಣವಾಗಿದೆ. ಇದರ ಜೊತೆಗೆ ಇಂಧನ ಬೆಲೆಯೂ ಇನ್ನೊಂ ದು ಕಾರಣವಾಗಿದೆ. ಪ್ರಿಯದರ್ಶಿನಿ ಯೋಜನೆ ಜ್ಯಾರಿಗೊ ಳಿಸಿದ ನಂತರ ಖಾಸಗಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದೂ ನಷ್ಟಕ್ಕೆ ಇನ್ನೊಂದು ಕಾರಣವಾಗಿದೆ. ಈ ಎಲ್ಲಾ ವಿಷಯದ ಬಗ್ಗೆ ಸಮಾವೇಶದಲ್ಲಿ ಸಮಗ್ರ ಚರ್ಚೆ ನಡೆಸಲಾಗುವುದೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.







