ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯ ಲ್ಯಾಪ್‌ಟಾಪ್ ಹಾಗೂ ಇತರ ಸಾಮಗ್ರಿಗಳು ಒಳಗೊಂಡ ಬ್ಯಾಗ್‌ಗಳನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ಸನಿಲ್ ಕುಮಾರ್ ಸಿ.ಎಸ್.ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂ ಕಾವುಪುರ ಕುನಿಯೇರಿ ಹೌಸ್‌ನ ಮೊಹಮ್ಮದ್ ಜಾಬೀರ್ (38) ಬಂಧಿತ ಆರೋಪಿ. ಮಂಗಳೂರು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿ ಪಟ್ಟಾಂಬಿ ಚೇಂಬ್ರಾತೆಕ್ಕೆ ಪುರಕ್ಕಲ್ ನಿವಾಸಿ ವಿಷ್ಣುದತ್ ಟಿ.ಪಿ. ಎಂಬವರು ಆಗಸ್ಟ್ 22ರಂದು ಪರಶುರಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಅವರ ಲ್ಯಾಪ್‌ಟಾಪ್ ಒಳಗೊಂಡಿದ್ದ ಎರಡು ಬ್ಯಾಗ್‌ಗಳನ್ನು ಕಳವುಗೈಯ್ಯಲಾಗಿತ್ತು. ಈ ಬಗ್ಗೆ ವಿಷ್ಣುದತ್ ನೀಡಿದ ದೂರಿನಂತೆ ಕಾಸರಗೋಡು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆರೋಪಿಯನ್ನು ಇಂದು ಮುಂಜಾನೆ ಬಂಧಿಸಲಾಗಿದೆ.
ಆರೋಪಿಯನ್ನು ಬಂಧಿಸಿದ ಪೊಲೀಸರ ತಂಡದಲ್ಲಿ ರೈಲ್ವೇ ಪೊಲೀಸ್ ಠಾಣೆಯ ಎಎಸ್‌ಐ ಮಹೇಶ್ ಸಿ.ಕೆ, ಆರ್‌ಪಿಎಫ್ ಸಿಬ್ಬಂದಿಗಳಾದ ಕೆ.ಎಂ. ಶೈಜು, ಬೈಜು ಎ.ಸಿ, ವಿಜೇಶ್, ಟಿ. ಶ್ರೀನಾಥ್ ಮತ್ತು ಪ್ರಕಾಶ್ ಟಿ.ವಿ. ಎಂಬವರು ಒಳಗೊಂಡಿದ್ದರು.






