ಎಂಎಸ್‌ಎಫ್ ಜಿಲ್ಲಾ ಸಮಿತಿಯಲ್ಲಿ ಸಂದಿಗ್ಧತೆ: 5 ಪದಾಧಿಕಾರಿಗಳು ರಾಜೀನಾಮೆ; ಮಂಜೇಶ್ವರ ಮಂಡಲ ಸಮಿತಿಯಲ್ಲೂ ರಾಜೀನಾಮೆ ಸುಳಿವು

ಕಾಸರಗೋಡು: ಎಂಎಸ್‌ಎಫ್ ಜಿಲ್ಲಾ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯ ಏಕಪಕ್ಷೀಯ ತೀರ್ಮಾನವನ್ನು ಪ್ರತಿಭಟಿಸಿ ಜಿಲ್ಲಾ ಕೋಶಾಧಿಕಾರಿ ಸರ್ಫರಾಸ್ ಬಂದ್ಯೋಡ್ ಸಹಿತದ ಐದು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಸರ್ಫರಾಸ್‌ನ ಹೊರತಾಗಿ ಉಪಾಧ್ಯಕ್ಷರಾದ ಜಂಶೀರ್ ಮೊಗ್ರಾಲ್, ಮುರ್ಶಿದ್ ಮೊಗ್ರಾಲ್, ಕಾರ್ಯದರ್ಶಿಗಳಾದ ಬಿಲಾಲ್ ಆರಿಕ್ಕಾಡಿ, ಅನ್ಸಾರ್ ವರ್ಕಾಡಿ ಎಂಬಿವರು ಜಿಲ್ಲಾ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಂಜೇಶ್ವರ ಮಂಡಲ ಎಂಎಸ್‌ಎಫ್ ಪದಾಧಿಕಾರಿಗಳು ಕೂಡಾ ಇಂದು ರಾಜೀನಾಮೆ ನೀಡುವರು ಎಂಬ ಸೂಚನೆಯೂ ಇದೆ. ಎಂಎಸ್‌ಎಫ್ ರಾಜ್ಯ ಸಮಿತಿಗೆ ಕಾಸರಗೋಡು ಜಿಲ್ಲಾ ಸಮಿತಿಯಿಂದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಸವಾದ್ ಅಂಗಡಿಮೊಗರುರನ್ನು ಶಿಫಾರಸು ಮಾಡಬೇಕೆಂದು ರಾಜೀನಾಮೆ ನೀಡಿದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಬಿವರಿಗೆ ಈ ಮೊದಲೇ ತಿಳಿಸಿದ್ದರೆನ್ನಲಾಗಿದೆ. ಆದರೆ ಜಿಲ್ಲಾಧ್ಯಕ್ಷ ಸೈಫುದ್ದೀನ್ ತಂಙಳ್, ಪ್ರಧಾನ ಕಾರ್ಯದರ್ಶಿ ಅನ್ಸಾರ್ ಕುನ್ನಿಲ್ ಏಕಪಕ್ಷೀಯವಾಗಿ ಶಾನಿಫ್ ನೆಲ್ಲಿಕಟ್ಟೆಯವರನ್ನು ರಾಜ್ಯ ಸಮಿತಿಗೆ ನಿರ್ದೇಶಿಸಿ ನಿನ್ನೆ ಘೋಷಣೆಯನ್ನು ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಮಿತಿ ಎಂಎಸ್‌ಎಫ್ ರಾಜ್ಯ ಜೊತೆ ಕಾರ್ಯದರ್ಶಿಯಾಗಿ ಶಾನಿಫ್‌ರನ್ನು ಆಯ್ಕೆ ಮಾಡಿದೆ.

ಜಿಲ್ಲೆಯ ಎಂಎಸ್‌ಎಫ್‌ನ ಹಿರಿಯ ಮುಖಂಡನಾಗಿರುವ ಸವಾದ್ ಅಂಗಡಿಮುಗರುರನ್ನು ಪರಿಗಣಿಸದೆ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ತೆಗೆದ ಈ ತೀರ್ಮಾನವನ್ನು ಪ್ರತಿಭಟಿಸಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಸವಾದ್ ಅಂಗಡಿಮೊಗರುರನ್ನು ರಾಜ್ಯ ಸಮಿತಿ ಸದಸ್ಯನಾಗಿ ಜಿಲ್ಲೆಯಿಂದ ಸೂಚಿಸಲು ತೀರ್ಮಾನಿಸಿರುವುದಾಗಿ ಜಿಲ್ಲಾಧ್ಯಕ್ಷ ಈ ಮೊದಲು ಜಿಲ್ಲಾ ಸಮಿತಿಯಲ್ಲಿ ಪ್ರಕಟಿಸಿದ್ದರೆಂದು ಹೇಳಲಾಗುತ್ತಿದೆ. ಇದರ ಹೊರತಾಗಿ ಈ ಮೊದಲು ಜಿಲ್ಲಾ ಸಮಿತಿಯಿಂದ ಎಂಎಸ್‌ಎಫ್ ರಾಜ್ಯ ಸಮಿತಿಗೆ ಇಬ್ಬರು ಪದಾಧಿಕಾರಿಗಳು ಆಯ್ಕೆಯಾಗಿದ್ದರು.

ಈ ಬಾರಿ ಅದನ್ನು ಒಂದಾಗಿ ಕಡಿತಗೊಳಿಸಲಾಗಿದೆ ಎಂಬ ಆರೋಪವೂ ಇದೆ. ರಾಜ್ಯ ಸಮಿತಿ ಸದಸ್ಯತ್ವ ಸಂಬಂಧಿಸಿ ಜಿಲ್ಲಾ ನಾಯಕತ್ವದ ಅಭಿಪ್ರಾಯ ಭಿನ್ನತೆಯಾಗಿದೆ ರಾಜೀನಾಮೆಗೆ ಕಾರಣವಾಗಿರುವುದೆಂದು ಹೇಳಲಾಗುತ್ತಿದೆ. ಇದು ಜಿಲ್ಲೆಯಲ್ಲಿ ಸಂಘಟನೆಗೆ ಸಂದಿಗ್ಧತೆ ಉಂಟುಮಾಡಿದೆ ಎಂದು, ಅದರಂಗವಾಗಿ ಮಂಜೇಶ್ವರ ಮಂಡಲ ಸಮಿತಿಯ ರಾಜಿ ಯತ್ನವೆಂದು ಹೇಳಲಾಗುತ್ತಿದೆ. ಮಾತ್ರವಲ್ಲ ಇತರ ಮಂಡಲ ಸಮಿತಿಗಳಲ್ಲೂ ಈ ಭಿನ್ನತೆ ಇದೆ ಎನ್ನಲಾಗಿದೆ. ಜಿಲ್ಲಾ ಪದಾಧಾಕಾರಿಗಳಲ್ಲಿ ಕೂಡಾ ಆಶಯವಿನಿಮಯ ನಡೆಸದೆ ಸಂಘಟನೆಯ ಬಗ್ಗೆ ತೀರ್ಮಾನ ತೆಗೆಯುವ ಜಿಲ್ಲಾ ನೇತೃತ್ವದ ಏಕಪಕ್ಷೀಕ ತೀರ್ಮಾನಕ್ಕಿರುವ ಪ್ರತಿಭಟನೆ ಐದು ಜಿಲ್ಲಾ ಪದಾಧಿಕಾರಿಗಳ ರಾಜೀನಾಮೆಗೆ ಹೇತುವಾಗಿದೆ ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page