ಎಂಡಿಎಂಎ ಪ್ರಕರಣ: ಇನ್ನೋರ್ವ ಆರೋಪಿ ಸೆರೆ ಬಂಧಿತರ ಸಂಖ್ಯೆ 8ಕ್ಕೇರಿಕೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಾಲಿಕಡವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ಮಾದಕದ್ರವ್ಯವಾದ 139.29 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವನನ್ನು ವಿಶೇಷ ಪೊಲೀಸರ ತಂಡ ಬಂಧಿಸಿದೆ. ಉತ್ತರ ಪ್ರದೇಶ ಆಗ್ರಾ ನಿವಾಸಿ ವಿಷ್ಣುಕುಮಾರ್ (26) ಬಂಧಿತ ಆರೋಪಿ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಈ ತನಕ ಬಂಧಿತರಾದವರ ಸಂಖ್ಯೆ ಈಗ ಎಂಟಕ್ಕೇರಿದೆ.

ಈ ಪ್ರಕರಣದ ಮುಖ್ಯ ಸೂತ್ರಧಾರಿಣಿ ಗುಜರಾತ್ ಅಹಮ್ಮದಾಬಾದ್ ಲಾಂಬಾ ನಿವಾಸಿ ಹಾಗೂ ಮೂಲತಃ ಪಶ್ಚಿಮ ಬಂಗಾಳ ಸಾರಾ ಜಿಲ್ಲೆಯ ನರೇಂದ್ರ ಫೂಟ್‌ನ ಸಾತ್ತಿ ಶೇಖ್  ಮತ್ತು ಘಾನ ಪ್ರಜೆ ವಿಕ್ಟರ್ ದಸಾಬೆಯನ್ನು ಪೊಲೀಸರು ದಿನಗಳ ಹಿಂದೆಯೇ ಗುಜರಾತಿನಿಂದ ಬಂಧಿಸಿದ್ದರು. ಅವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಮಾದಕದ್ರವ್ಯ ದಂಧೆಯ ಇನ್ನೋರ್ವ ಕೊಂಡಿಯಾಗಿರುವ ವಿಷ್ಣುಕುಮಾರ್‌ನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ಆತನನ್ನು ಇಂದೋರ್‌ನಿಂದ ಬಂಧಿಸಲಾಗಿದೆ. ಹೊಸದುರ್ಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಿತು ತಚ್ಚಚೇರಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಎ. ಸನೀಶ್ ಕುಮಾರ್, ಟಿ.ಕೆ. ಅನಿಲ್ ಜೋತಿಷ್ ಮತ್ತು ಸಿಪಿಒ ಜಯೇಶ್ ಎಂಬವರ ನೇತೃತ್ವದ ಪೊಲೀಸ್ ತಂಡ ಈತನನ್ನು ಬಂಧಿಸಿದೆ. ಈ ಪ್ರಕರಣದ ತನಿಖೆ ಇನ್ನೂ ಮುಂದುವರಿಯುತ್ತಿದೆ.

RELATED NEWS

You cannot copy contents of this page