ಕಾಸರಗೋಡು: 2010ರಲ್ಲಿ ಪರಶ್ಶಿನಿಕಡವು ಮಾಂಕಡವು ಎಂಬಲ್ಲಿ ಜಲೀಲ್ ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿ ಸೆರೆಗೀಡಾಗಿದ್ದಾನೆ. ವಾಳಯಿಲ್ ಮುಹಮ್ಮದ್ ಅಲಿ (55) ಎಂಬಾತನನ್ನು ಕಣ್ಣೂರು ಸಿಟಿ ಪೊಲೀಸರ ಪ್ರತ್ಯೇಕ ತನಿಖಾ ತಂಡ ಉಪ್ಪಳದಿಂದ ಸೆರೆಹಿಡಿದಿದೆ. 2010 ಸೆಪ್ಟಂಬರ್ 17ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಪರಶ್ಶಿನಿಕಡವು ಮಾಂಕಡವಿನಲ್ಲಿ ಮೊಯ್ದು ಎಂಬವರ ಮಕ್ಕಳಾದ ಜಲಾಲ್ ಹಾಗೂ ಶಂಸೀರ್ ಎಂಬಿವರನ್ನು ಸಹೋದರಿಯ ಪತಿಯಾದ ಮುಹಮ್ಮದ್ ಅಲಿ ಆಸ್ತಿ ತರ್ಕದ ವಿವಾದದ ಹಿನ್ನೆಲೆಯಲ್ಲಿ ಕೊಲೆಗೈಯ್ಯಬೇಕೆಂಬ ಉದ್ದೇಶದೊಂದಿಗೆ ಇರಿದು ಗಾಯಗೊಳಿಸಿದ್ದನು. ಇರಿತದಿಂದ ಗಂಭೀರ ಗಾಯಗೊಂಡ ಜಲಾಲ್ ಬಳಿಕ ಸಾವಿಗೀಡಾಗಿದ್ದರು. ಶಂಸೀರ್ ಕೂಡಾ ಇರಿತದಿಂದ ಗಂಭೀರ ಗಾಯಗೊಂ ಡಿದ್ದರು. ಈ ಘಟನೆಗೆ ಸಂಬಂಧಿಸಿ ವಳಪಟ್ಟಣಂ ಪೊಲೀಸರು ಕೇಸು ದಾಖಲಿಸಿ ಮುಹಮ್ಮದ್ ಅಲಿಯನ್ನು ಬಂಧಿಸಿದ್ದರು. ಆದರೆ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಈತ ಮರಳಿ ಹಾಜರಾಗಿರಲಿಲ್ಲ. ವಿವಿಧ ಸ್ಥಳಗಳಲ್ಲಿ ಪೊಲೀಸರು ಈತನಿಗಾಗಿ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈತನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಆಪರೇಶನ್ ಗ್ರಿಪ್ ಯೋಜನೆಯಂಗವಾಗಿ ಕಣ್ಣೂರು ರೇಂಜ್ ಡಿಐಜಿ ಕೆ. ಕಾರ್ತಿಕ್ ಅವರ ನೇತೃತ್ವದಲ್ಲಿ ಕಣ್ಣೂರು ಸಿಟಿ ಪೊಲೀಸ್ ಕಮಿಶನರ್ ವಿಜಯ್ ಭರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕೊಲೆ ಕೃತ್ಯದ ಬಳಿಕ ಮುಹಮ್ಮದ್ ಅಲಿ ಕೇರಳ ಹಾಗೂ ಕರ್ನಾಟಕದ ವಿವಿಧೆಡೆ ವಾಸಿಸುತ್ತಿದ್ದನು. ಬೀದಿ ಬದಿ ವ್ಯಾಪಾರ ಹಾಗೂ ಅಡುಗೆ ಕಾರ್ಮಿಕನಾಗಿಯೂ ಈತ ಕೆಲಸ ನಿರ್ವಹಿಸುತ್ತಿದ್ದನು.







