ಓಡಂಗಲ್ಲು ಸೇತುವೆ ನಿರ್ಮಾಣ ನಾಲ್ಕು ವರ್ಷಗಳಲ್ಲಿ ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ- ಶಾಸಕ ಕಲ್ಲಟ್ರ ಮಾಹಿನ್

ಬದಿಯಡ್ಕ: ಗ್ರಾಮೀಣ ಪ್ರದೇಶದ ಜನರ ಬಹುಕಾಲದ ಕನಸಾದ ಓಡಂಗಲ್ಲು ಸೇತುವೆ ನಿರ್ಮಾಣಕ್ಕೆ ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಭರವಸೆ ನೀಡಿದರು. ಅವರು ಅಜ್ಜಿಮೂಲೆಯ ಜೈ ಗುರುದೇವ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ ೩೬ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಜನತೆಯ ಮತೀಯ ಸಾಮರಸ್ಯ , ಒಗ್ಗಟ್ಟು ಹಾಗೂ ಜನಪರ ಹೋರಾಟ ನಾಡಿನ ಅಭಿವೃದ್ಧಿಗೆ ನಾಂದಿಯಾಗಿದ್ದು ಶ್ರೀಕೃಷ್ಣ ಅಷ್ಟಮಿ ಆಚರಣೆಯ ಮೂಲಕ ಅದು ಪ್ರತಿಫಲನಗೊಳ್ಳುತ್ತಿರುವುದು ಧಾರ್ಮಿಕ ಭಾವಕ್ಕೊಂದು ಸಾಕ್ಷಿಯಾಗಿದೆ ಎಂದರು. ಧಾರ್ಮಿಕ, ಸಾಮಾಜಿಕ ಮುಂದಾಳು ಶ್ರೀಕೃಷ್ಣ ಭಟ್ ಅಜ್ಜಿಮೂಲೆ ಅಧ್ಯಕ್ಷತೆ ವಹಿಸಿದ್ದರು. ಉಕ್ಕಿನಡ್ಕ ಇಗರ್ಜಿಯ ಧರ್ಮಗುರು ರೆ. ಫಾ. ಗಿಲ್ಬರ್ಟ್ ಮಸ್ಕರೆನ್ಹಸ್, ಕುಂಬ್ಡಾಜೆ ಪಂ. ಅಧ್ಯಕ್ಷೆ ಯಶೋದ ಎನ್., ಧಾರ್ಮಿಕ ಮುಂದಾಳು ಡಾ. ವೇಣುಗೋಪಾಲ ಕಳೆಯತ್ತೋಡಿ, ಅಧ್ಯಾಪಕ ಹರಿನಾರಾಯಣ ಶಿರಂತಡ್ಕ, ಬದಿಯಡ್ಕ ಪಂ. ಸದಸ್ಯ ಮಧುಸೂಧನ ಕಂಗೀಲ, ಕುಂಬ್ಡಾಜೆ ಪಂ. ಸದಸ್ಯ ಮಹೇಶ್ ಅಜ್ಜಿಮೂಲೆ ಉಪಸ್ಥಿತರಿದ್ದರು. ಕ್ಲಬ್ ಗೌರವಾಧ್ಯಕ್ಷ ಜೋನ್ ಕ್ರಾಸ್ತ ಸ್ವಾಗತಿಸಿ, ರಾಜೇಶ್ ಅಜ್ಜಿಮೂಲೆ ವಂದಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿದರು.
ಕಾರ್ಯಕ್ರಮವನ್ನು ಜಾನಕಿ ಅಜ್ಜಿಮೂಲೆ ಉದ್ಘಾಟಿಸಿದರು. ಬಳಿಕ ಏತಡ್ಕದ ಶ್ರೀ ದುರ್ಗಾಪರಮೇಶ್ವರೀ ಭಜನಾ ಸಂಘ ಹಾಗೂ ವಿದ್ಯಾಗಿರಿಯ ಧರ್ಮಶಾಸ್ತ್ರ ಭಜನಾ ಸಂಘದ ವತಿಯಿಂದ ಕುಣಿತ ಭಜನೆ ನಡೆಯಿತು.
ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
‘ಯಕ್ಷ ತೆಲಿಕೆ’ ತಂಡದ ಯಕ್ಷ-ಹಾಸ್ಯ ವೈಭವ ರಂಜಿಸಿತು. ಧೀರಜ್ ರೈ ಸಂಪಾಜೆ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಧೀರಜ್ ರೈ ಸಂಪಾಜೆ, ರೋಹಿತ್ ಉಚ್ಚಿಲ ಹಾಗೂ ಶ್ರೀಧರ ವಿಟ್ಲ, ಮದ್ದಳೆಯಲ್ಲಿ ಲವಕುಮಾರ್ ಐಲ ಹಾಗೂ ಚಕ್ರತಾಳದಲ್ಲಿ ನಿಶ್ವತ್ ಜೋಡುಕಲ್ಲು ಭಾಗವಹಿಸಿದರು.
ಮುಮ್ಮೇಳದಲ್ಲಿ ‘ಯಕ್ಷ ಬೊಳ್ಳಿ’ ದಿನೇಶ್ ರೈ ಕಡಬ, ‘ಕುಸಾಲ್ದ ಗುರ್ಕಾರೆ’ ದಿನೇಶ್ ಕೋಡಪದವು, ‘ರಂಗ ಸವ್ಯಸಾಚಿ’ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹಾಗೂ ‘ರಂಗ್ ದ ರಾಜೆ’ ಸುಂದರ್ ರೈ ಮಂದಾರ ಅವರು ನೀಡಿದ ಹಾಸ್ಯಭರಿತ ಕಲಾಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

RELATED NEWS

You cannot copy contents of this page