ಕಾಸರಗೋಡು: ಪಾಲಕ್ಕಾಡ್ ಡಿವಿಶನ್ನಿಂದ ಮಂಗಳೂರು ವಲಯವನ್ನು ಬೇರ್ಪಡಿಸಲಿರುವ ತೀರ್ಮಾನ, ತಿರುವನಂತಪುರ ಡಿವಿಶನ್ ವಿಭಜಿಸಲಿರುವ ಯತ್ನ ಸಕ್ರಿಯವಾಗಿರುವ ಸನ್ನಿವೇಷದಲ್ಲಿ ಕೇರಳದ ರೈಲ್ವೇ ಅಭಿವೃದ್ಧಿಗೆ ಪ್ರತ್ಯೇಕ ವಲಯ ಬೇಕೆಂಬ ಬೇಡಿಕೆಯು ತೀವ್ರಗೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಯಾಣಿಕರ ಸಂಖ್ಯೆ, ಆದಾಯ ಪರಿಗಣಿಸುವಾಗ ಕೇರಳ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಿದೆ. ಇದಕ್ಕನುಸಾರ ವಾಗಿರುವ ನವೀಕರಣ ಚಟುವಟಿಕೆಗಳು ಕೇರಳದಲ್ಲಿ ಉಂಟಾಗುತ್ತಿಲ್ಲವೆಂಬ ಆಕ್ಷೇಪವಿದೆ. ಚೆನ್ನೈ ಕೇಂದ್ರವಾದ ದಕ್ಷಿಣ ರೈಲ್ವೇ ವಲಯದ ಅಧೀನದಲ್ಲಿ ಕೇರಳದ ಹೆಚ್ಚಿನ ಭಾಗ ರೈಲ್ವೇ ಶೃಂಖಲೆ ಸೇರಿದೆ. ಗಾತ್ರದ ವಿಷಯದಲ್ಲಿ ದೇಶದ ೧೯ ರೈಲ್ವೇ ವಲಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ರೈಲ್ವೇ ಇದೆ. ಪಶ್ಚಿಮ, ದಕ್ಷಿಣ ಸೆಂಟ್ರಲ್ ವಲಯಗಳ ಜೊತೆಗೆ ಆರು ಡಿವಿಶನ್ಗಳು ಸೇರಿರುವ ದೇಶದ ಅತ್ಯಂತ ದೊಡ್ಡ ವಲಯಗಳಲ್ಲಿ ಇದು ಒಂದಾಗಿದೆ. ಪ್ರಸ್ತುತ ತಿರುವನಂತಪುರ, ಪಾಲಕ್ಕಾಡ್, ಮಧುರ ಡಿವಿಶನ್ಗಳು ಕೇರಳದ ವಿವಿಧ ಹಳಿಗಳನ್ನು ನೋಡಿಕೊಳ್ಳುತ್ತಿದೆ.
ಇದರ ಹೊರತಾಗಿ ಕೊಂಕಣ್ ರೈಲ್ವೆಯ ವ್ಯಾಪ್ತಿಯಲ್ಲೂ ಕೆಲವು ಹಳಿಗಳಿವೆ. ಇದೇ ವೇಳೆ ವಿಶಾಖಪಟ್ಟಣಂ ಕೇಂದ್ರವಾಗಿ ರೂಪೀಕರಿಸಿದ ಸೌತ್ ಕೋಸ್ಟ್ ರೈಲ್ವೇ ಝೋನ್ ಚಟುವಟಿಕೆ ಆರಂಭಿಸಿರು ವುದರೊಂದಿಗೆ ಕೇರಳಕ್ಕೆ ಹೊಸ ವಲಯ ರೂಪೀಕರಿಸುವುದಕ್ಕಿರುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಸಕ್ರಿಯವಾಗಿದೆ. ಹೊಸ ವಲಯಗಳು ಆರ್ಥಿಕ ಭಾರವನ್ನು ಸೃಷ್ಟಿಸಬಹುದೆಂದು, ಈಗ ಇರುವ ವಲಯಗಳ ಸಂಖ್ಯೆಯನ್ನು ಗರಿಷ್ಠ ಕಡಿಮೆ ಮಾಡಬೇಕು ಎಂಬುದಾಗಿದೆ ರೈಲ್ವೇಯ ನಿಲುವು ಎಂದು ಹೇಳಲಾಗುತ್ತಿದ್ದರೂ ವಿಶಾಖಪಟ್ಟಣಂ ಸೌತ್ ಕೋಸ್ಟ್ ರೈಲ್ವೇ ವಲಯ ಚಟುವಟಿಕೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ ರೈಲ್ವೇ ವಲಯದ ಬೇಡಿಕೆಯೂ ಕೇಳಿ ಬರುತ್ತಿದೆ.
ಕುಂಬಳೆ ರೈಲ್ವೇ ಸ್ಟೇಷನ್ನ ೩೪ ಎಕ್ರೆಯಷ್ಟು ಸ್ಥಳ ಉಪಯೋಗಿಸಿಕೊಂಡು ರೈಲ್ವೇಯ ಅಭಿವೃದ್ಧಿಗಳಿಗೆ ಉಪಯೋಗಪ್ರದಗೊಳಿಸಬಹುದೆಂದು ಪ್ರಯಾಣಿಕರು ನಿರೀಕ್ಷಿಸುತ್ತಾರೆ. ಉಳ್ಳಾಲದ ರೈಲ್ವೇ ಇಲೆಕ್ಟ್ರಿಕಲ್ ಟಿ.ಆರ್.ಡಿ (ಟ್ರಾಕ್ಷನ್ ಆಂಡ್ ಡಿಸ್ಟ್ರಿಬ್ಯೂಷನ್) ಕುಂಬಳೆಗೆ ಬದಲಿಸಲು ರೈಲ್ವೇ ಚಿಂತಿಸುತ್ತಿದೆ ಎಂಬ ಮಾಹಿತಿಯೂ ಲಭಿಸಿದೆ. ಮಂಗಳೂರು ವಲಯ ಮೈಸೂರಿಗೆ ಸೇರುವಾಗ ರೈಲ್ವೇ ವಿದ್ಯುತ್ ವಲಯದಲ್ಲೂ ವಿಭಜನೆ ಉಂಟಾಗಲಿದ್ದು, ಹಾಗಾದರೆ ಈ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂದು ಚೆನ್ನೈ ಪ್ರಿನ್ಸಿಪಲ್ ಚೀಫ್ ಇಲೆಕ್ಟ್ರಿಕಲ್ ಇಂಜಿನಿಯರ್ ತಿಳಿಸಿದ್ದು, ಉನ್ನತ ತಂಡ ಇತ್ತೀಚೆಗೆ ಕುಂಬಳೆ, ಕಾಸರಗೋಡಿಗೆ ಸಂದರ್ಶನ ನೀಡಿತ್ತು. ರೈಲ್ವೇ ಅಭಿವೃದ್ಧಿ ವಿಷಯದಲ್ಲಿ ಕುಂಬಳೆ ಮತ್ತೆ ಮುನ್ನಲೆಗೆ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯರು ಆಹ್ಲಾದ ಹೊಂದಿದ್ದಾರೆ.






