ಕಾಡು ಪೊದೆ ಬೆಳೆಯುತ್ತಿರುವ ವಿದ್ಯಾನಗರ ಕೈಗಾರಿಕಾ ಎಸ್ಟೇಟ್ 

ಕಾಸರಗೋಡು: ವಿದ್ಯಾನಗರ ಕೈಗಾರಿಕಾ ಎಸ್ಟೇಟ್‌ನ ಕೈಗಾರಿಕಾ ಘಟಕಗಳು ಕಾಡು ಆವರಿಸಿ ಅಪ್ರತ್ಯಕ್ಷವಾಗುತ್ತಿವೆ. ಕಳೆದ ಒಂದು ದಶಕದಿಂದ ಕೈಗಾರಿಕಾ ರಂಗದಲ್ಲಿ ರಾಜ್ಯ ನಡೆಸುತ್ತಿರುವ ಪರಿಷ್ಕಾರಗಳು, ಯೋಜನೆಗಳು ಕೈಗಾರಿಕಾ ವಲಯ ವನ್ನು ಈರೀತಿಗೆ ಕೊಂಡೊಯ್ದಿದೆ ಎಂದು ಹೇಳಲಾಗುತ್ತಿದೆ. ಕೈಗಾರಿಕಾ ಎಸ್ಟೇಟ್‌ನ 1೦೦ರಷ್ಟು ಘಟಕಗಳಲ್ಲಿ ಹೆಚ್ಚಿನವು ಹೆಸರಿಗೆ ಮಾತ್ರವೇ ಕಾರ್ಯಾಚರಿಸುತ್ತಿವೆ. ಎಸ್ಟೇಟ್‌ನ ಪ್ರಧಾನ ರಸ್ತೆ ಡಾಮರೀಕರಣವಿಲ್ಲದೆ ಹೊಂಡಗಳಿಂದ ತುಂಬಿ ಶೋಚನೀ ಯಾವಸ್ಥೆಯಲ್ಲಿದೆ. ಬೀದಿ ದೀಪಗಳು ಕಣ್ಣು ಮುಚ್ಚಿವೆ. ಕೆಲವು ಕಟ್ಟಡಗಳ ಸುತ್ತು ಪೊದೆ ಹಾಗೂ ಹುಲ್ಲು ತುಂಬಿಕೊಂಡಿದೆ. ಕಾಡು ಮೃಗಗಳು ಕೂಡಾ ಈ ಪೊದೆಗಳೆಡೆಯಲ್ಲಿ ಅವಿತುಕೊಂಡಿದ್ದರೂ ತಿಳಿಯಲಾರ ದಷ್ಟು ಪೊದೆ ಬೆಳೆದಿದೆ. ಹಲವು ಕೈಗಾರಿಕಾ ಶೆಡ್‌ಗಳು ಈ ದಾರಿಯಲ್ಲಿ ಹೋಗುವಾಗ ಕಣ್ಣಿಗೆ ಕಾಣದಂತಹ ಸ್ಥಿತಿಯಲ್ಲಿದೆ.

ರಾಜ್ಯದಲ್ಲಿ ಸುಸ್ಥಿರ ಆದಾಯ, ಯುವ ಜನಾಂಗಕ್ಕೆ ಉದ್ಯೋಗ ಖಚಿತಪಡಿಸುವುದಕ್ಕೆ ೧೯೭೭ರಲ್ಲಿ ಕೇಂದ್ರ ಸರಕಾರ ಶೆಡ್ ನಿರ್ಮಿಸಿದ್ದು ಬಳಿಕ ಅದರ ಹೊಣೆಯನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿತ್ತು. ರಾಜ್ಯ ಸರಕಾರ ಕೈಗಾರಿಕಾ ಎಸ್ಟೇಟನ್ನು ವಿಪುಲಗೊಳಿಸು ವುದಕ್ಕೆ ಕ್ರಮ ಕೈಗೊಂಡಿತ್ತು. ಆದರೆ ಕೈಗಾರಿಕೆಗಳನ್ನು ಬೆಳೆಸಿಕೊಂಡು ಬರುವುದರಲ್ಲಿ ಸರಕಾರ ಪರಾಜಯಗೊಂ ಡಿದೆ. ಕೈಗಾರಿಕಾ ಎಸ್ಟೇಟ್‌ಗಳ ಶೆಡ್‌ಗಳ ಹೊಣೆ ವಹಿಸುವ ಸಿಡ್ಕೋ ಆದಾಯ ಮಾರ್ಗವನ್ನು ಕಂಡುಕೊಳ್ಳಲು ಯತ್ನ ಆರಂಭಿಸಿರುವುದರೊಂದಿಗೆ ಕೈಗಾರಿಕಾ ಶೆಡ್‌ಗಳು ಪೂರ್ಣವಾಗಿ ನಿಶ್ಚಲಾವಸ್ಥೆಗೆ ತಲುಪಿದೆ. ರಾಜ್ಯದಲ್ಲಿ ವಿದ್ಯಾನಗರದಂ ತಹ ೧೭ ಕೈಗಾರಿಕಾ ಎಸ್ಟೇಟ್‌ಗಳು ಇವೆ. ಇವುಗಳನ್ನು ಅಭಿವೃದ್ಧಿಗೊಳಿಸಲು ಹಾಗೂ ದಕ್ಷತೆಯಿಂದ ನಡೆಸಿಕೊಂಡು ಹೋಗಲು ಕೈಗೊಳ್ಳುವ ಯೋಜನೆಗಳು, ತೀರ್ಮಾನಗಳು ಎಲ್ಲಾ ಕೈಗಾರಿಕಾ ಎಸ್ಟೇಟ್‌ಗಳಿಗೆ ಒಂದೇ ರೀತಿಯಲ್ಲಿರುವುದಿಲ್ಲವೆಂದು ಹೇಳಲಾಗುತ್ತಿದೆ. ಈ ವಿಭಿನ್ನ ನೀತಿಯಿಂದಾಗಿ ಎಸ್ಟೇಟ್‌ಗಳು ನಾಶವಾಗಲು ಕಾರಣವೆನ್ನಲಾಗುತ್ತಿದೆ. ಇದೇ ವೇಳೆ ಕೆಲವು ಕೈಗಾರಿಕಾ ಎಸ್ಟೇಟ್‌ಗಳು ಸಕ್ರಿಯವಾಗಿ ಕಾರ್ಯಾಚರಿಸುತ್ತಿವೆ.

You cannot copy contents of this page