ಪೆರಡಾಲ ದೇವಸ್ಥಾನಕ್ಕೆ ಬಸ್ ಸಂಚಾರ ಪುನರಾರಂಭ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಬಸ್ ಸಂಚಾರ ಪುನರಾರಂಭಗೊಂಡಿದೆ. ನೀರ್ಚಾಲ್ ನಿಂದ ಕನ್ಯಪ್ಪಾಡಿ- ಪೆರಡಾಲ ಮೂಲಕ ಬದಿಯಡ್ಕಕ್ಕೆ, ಅನಂತರ ಕಾಸರಗೋಡಿಗೆ  ಸೂರ್ಯ ಸಂಸ್ಥೆಯ ಬಸ್ ಸಂಚರಿಸುತ್ತಿದೆ. ಇದು ಪೆರಡಾಲ ಕ್ಷೇತ್ರಕ್ಕೆ ತೆರಳುವ ಭಕ್ತರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಅವರು ದೇವರ ಮುಂದೆ ಪ್ರಾರ್ಥಿಸಿ ತೆಂಗಿನಕಾಯಿ ಒಡೆಯುವ ಮೂಲಕ ಬಸ್‌ನ ಮೊದಲ ಸಂಚಾರ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಪಂ. ಸದಸ್ಯ ಶ್ಯಾಮ ಪ್ರಸಾದ್ ಸರಳಿ, ಪೆರಡಾಲ ದೇವಸ್ಥಾನದ ಮೊಕ್ತೇಸರ ಜಗನ್ನಾಥ ರೈ, ಮಾಜಿ ಮೊಕ್ತೇಸರ ಚಂದ್ರಹಾಸ ರೈ, ಕ್ಷೇತ್ರದ ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಉದನೇಶ್ವರ ಬದಿಯಡ್ಕ, ಭಾಸ್ಕರ ಪಂಜಿತ್ತಡ್ಕ, ಶಿವಶಕ್ತಿ ಕ್ಲಬ್‌ನ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಪೆರಡಾಲ ದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಬಿಜೆಪಿ ಬದಿಯಡ್ಕ ಪಂಚಾಯತ್ 13ನೇ ವಾರ್ಡ್ ಸಮಿತಿ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಪಂಚಾಯತ್ ಉಪಾಧ್ಯಕ್ಷೆಯೂ, 13ನೇ ವಾರ್ಡ್ ಸದಸ್ಯೆಯಾದ ಅಶ್ವಿನಿ ಕೆ.ಎಂ. ಈ ಬೇಡಿಕೆ ಮುಂದಿರಿಸಿ ನಿರಂತರ ಪ್ರಯತ್ನ ನಡೆಸಿದ್ದರು. ಇದರಿಂದ ಈ ರೂಟ್‌ನಲ್ಲಿ ಬಸ್ ಸಂಚಾರಕ್ಕೆ ಸಾರಿಗೆ ಇಲಾಖೆ ಕ್ರಮಕೈಗೊಂಡಿದೆ.

You cannot copy contents of this page