ಅಪಘಾತದಿಂದ ಆಟೋ ರಿಕ್ಷಾದೊಳಗೆ ಸಿಲುಕಿಕೊಂಡ ಚಾಲಕನನ್ನು ರಕ್ಷಿಸಿದ ಅಗ್ನಿಶಾಮಕದಳ: ಪ್ರಯಾಣಿಕರಿಗೂ ಗಾಯ

ಕಾಸರಗೋಡು: ಕಾರು ಮತ್ತು ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದೊಳಗೆ ಸಿಲುಕಿಕೊಂಡ ಚಾಲಕನನ್ನು  ಅಗ್ನಿಶಾಮಕದಳ  ರಕ್ಷಿಸಿದ ಘಟನೆ  ಕಲ್ಲಕಟ್ಟ ಎಂಬಲ್ಲಿ ನಿನ್ನೆ ನಡೆದಿದೆ.

ಚೆಂಗಳ ಬಾರಿಕ್ಕಾಡಿನ ಪಿ.ಬಿ. ದಾಮೋದರನ್ (63) ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಆಟೋ ಚಾಲಕನಾಗಿದ್ದಾರೆ. ಇದೇ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕಲ್ಲಕಟ್ಟ ನಿವಾಸಿಗಳಾದ ರಾಜೇಶ್ವರಿ (48) ಮತ್ತು  ಎಂಡೋಸಲ್ಫಾನ್ ಸಂತ್ರಸ್ತೆಯಾಗಿರುವ ಪುತ್ರಿ ಅಂಜಲಿ (23)  ಕೂಡಾ ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಾಜೇಶ್ವರಿ ಹಾಗೂ ಅಂಜಲಿ  ಅಣಂಗೂರಿನ ಆಯುರ್ವೇದ ಆಸ್ಪತ್ರೆಯಿಂದ ಔಷಧಿ ಪಡೆದು ಮನೆಗೆ ದಾಮೋದರನ್‌ರ ಆಟೋ ರಿಕ್ಷಾದಲ್ಲಿ ಮನೆಗೆ  ಮರಳುತ್ತಿದ್ದರು.  ರಿಕ್ಷಾ ಕಲ್ಲಕಟ್ಟ ಬಳಿಗೆ ತಲುಪಿದಾಗ ಎದುರಿನಿಂದ  ಬಂದ ಕಾರು ಢಿಕ್ಕಿ ಹೊಡೆದಿದೆ.  ಇದನ್ನು ಕಂಡ ಸ್ಥಳೀಯರು ತಕ್ಷಣ ಅಲ್ಲಿಗೆ ತಲುಪಿ  ರಾಜೇಶ್ವರಿ ಮತ್ತು ಮಗಳನ್ನು ಹೊರತೆಗೆದಿದ್ದಾರೆ. ಆದರೆ ರಿಕ್ಷಾಚಾಲಕ ದಾಮೋದರನ್ ಗಂಭೀರ ಗಾಯಗೊಂಡು ಹೊರಕ್ಕೆ ಬರಲು ಸಾಧ್ಯವಾಗದೆ ಆಟೋ ರಿಕ್ಷಾದೊಳಗೆ ಸಿಲುಕಿಕೊಂಡಿದ್ದರು. ಈ ಬಗ್ಗೆ ಲಭಿಸಿದ ಮಾಹಿತಿಯಂತೆ  ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ವರ್ಗೀಸ್ ನೇತೃತ್ವದಲ್ಲಿ ಕಾಸರಗೋಡು ಅಗ್ನಿಶಾಮಕದಳದ ಸಿಬ್ಬಂದಿಗಳಾದ ಸಿರಾಜ್, ಪ್ರಜಿತ್, ಅನಂತು, ಅಭಿನಂದ್, ರಮೇಶ್, ಜುಬಿನ್, ಅಶ್ವಿನ್, ಸುಭಾಷ್, ಶ್ರೀಜಿತ್, ಜಿತಿನ್, ಸೋಬಿನ್  ಎಂಬಿವರು ಸ್ಥಳಕ್ಕೆ ತಲುಪಿ  ದಾಮೋದರನ್‌ರನ್ನು ಆಟೋ ರಿಕ್ಷಾದಿಂದ ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.

You cannot copy contents of this page