ಕೆಎಸ್‌ಇಬಿ ಕೇಬಲ್ ಕಳವುಗೈದು ಸಾಗಾಟ: 5 ಮಂದಿ ಆರೋಪಿಗಳ ಬಂಧನ; ಇನ್ನೋರ್ವನಿಗಾಗಿ ಶೋಧ

ಬದಿಯಡ್ಕ: ಪೆರ್ಲ ಬಳಿಯ ಗುಣಾಜೆಯಲ್ಲಿರಿಸಿದ್ದ ಕೆ. ಎಸ್. ಇ. ಬಿ ಯ ವಿದ್ಯುತ್ ಕೇಬಲ್ ಗಳನ್ನು ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ ಐದಕ್ಕೇರಿದೆ.
ಕರ್ನಾಟಕದ ಬಿ. ಸಿ ರೋಡ್ ನಿವಾಸಿಯೂ, ಪೆರ್ಲದಲ್ಲಿ ವಾಸಿಸುವ ನೌಶಾದ್ (34), ಕಿದೂರು ಪಂಜಿಕಲ್ಲಿನ ಇ. ಮುಹಮ್ಮದ್ (41), ಕರ್ನಾಟಕದ ಪರಂಗಿಪೇಟೆ ನಿವಾಸಿ ಮುಹಮ್ಮದ್ ಶಾಹಿದ್ ( 29), ಬೈತುಲ್ ಪದವಿನ ನವೀನ್ (48), ಬಂಟ್ವಾಳ ಬೈರ್ ಮಾರ್ ನಿವಾಸಿ ರಾಜೇಶ್ ಪೂಜಾರಿ ( 43) ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ. ಬದಿಯಡ್ಕ ಸಿ. ಐ ಅನೂಪ್ ಕೃಷ್ಣರ ನಿರ್ದೇಶ ಪ್ರಕಾರ ಎಸ್. ಎಚ್. ಒ ಸುನಿಲ್ ಕುಮಾರ್, ಎಸ್. ಐ ವಿನೋದ್ ಕುಮಾರ್ ಎಂಬಿವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯ ರಿಮ್ಯಾಂಡ್ ವಿಧಿಸಿದೆ.

ಈ ತಿಂಗಳ 24 ರಂದು ಮುಂಜಾನೆ ಪೆರ್ಲ ವಿದ್ಯುತ್ ಸೆಕ್ಷನ್ ವ್ಯಾಪ್ತಿಯ ಗುಣಾಜೆಯಲ್ಲಿರುವ ಟ್ರಾನ್ಸ್ ಫಾರ್ಮರ್ ಸಮೀಪದಲ್ಲಿ ಇರಿಸಿದ್ದ ವಿದ್ಯುತ್‌ಕೇಬಲ್ ಗಳನ್ನು ಆರೋಪಿಗಳು ಕಳವುಗೈದಿದ್ದರು. ಎರಡು ರೋಲ್ ಗಳಾಗಿ ಇರಿಸಿದ್ದ 1,000 ಮೀಟರ್ ಉದ್ದದ ಎಲ್. ಟಿ. ಎ. ಬಿ ಕೇಬಲ್ ಗಳನ್ನು ಆರೋಪಿಗಳು ಪಿಕ್ ಅಪ್ ವಾಹನದಲ್ಲಿ ಸಾಗಿಸಿದ್ದರು. ಇದಕ್ಕೆ ನಾಲ್ಕು ಲಕ್ಷ ರೂಪಾಯಿ ಮೌಲ್ಯವಿದೆ. ಕೇಬಲ್ ಗಳನ್ನು ಕದ್ದು ಸಾಗಿಸುವ ದೃಶ್ಯ ಸಮೀಪದ ಸಿ ಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ಅರಿತ ನಾಗರಿಕರು ಕೆ ಎಸ್ ಇ ಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಂತೆ ಪೆರ್ಲ ಎಲೆಕ್ಟ್ರಿಕಲ್ ಸೆಕ್ಷನ್ ಅಸಿಸ್ಟಂಟ್ ಎಂಜಿನಿಯರ್ ಸ್ಥಳಕ್ಕೆ ತಲುಪಿ ಪರಿಶೀಲಿಸಿದ ಬಳಿಕ ಬದಿ ಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಒಂದೇ ದಿನದಲ್ಲಿ ಆರೋಪಿಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ನಾಲ್ಕು ಮಂದಿ ಆರೋಪಿಗಳನ್ನು ಮೊದಲು ಬಂಧಿಸಿದ್ದರು. ಅನಂತರ ನಿನ್ನೆ ಒಬ್ಬನನ್ನು ಬಂಧಿಸಲಾಗಿದೆ. ಇನ್ನೂ ಓರ್ವ ಸೆರೆಗೀಡಾಗಲು ಬಾಕಿ ಇದ್ದಾನೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎ ಎಸ್ ಐ ಸಿನಿ ಸಿರಿಯಾಕ್, ಎಸ್ ಸಿ ಪಿ ಒ ಗಳಾದ ಗೋಕುಲ್, ಅನೀಶ್ ವರ್ಗೀಸ್, ಸಿ ಪಿ ಒ ಗಳಾದ ಶಿಬಿನ್ , ರತೀಶ್, ಸುಭಾಷ್ ಮೊದಲಾದವರಿದ್ದರು.

You cannot copy contents of this page