ಕುಂಬಳೆ: ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ನಕಲಿ ಸೌಂದರ್ಯವರ್ಧಕಗಳ ವಿರುದ್ಧ ಸರಕಾರ ಕ್ರಮ ತೀವ್ರಗೊಳಿಸಿದ ಬೆನ್ನಲ್ಲೇ ಕುಂಬಳೆಯಲ್ಲಿ ಫೇಸ್ ಕ್ರೀಮ್ ವಿತರಣೆ ಕಂಪೆನಿಯ ಕಚೇರಿಗಳನ್ನು ಮುಚ್ಚಿ ನೌಕರರು ಪರಾರಿಯಾಗಿದ್ದಾರೆ. ಕುಂಬಳೆ ಶಾಲೆ ರಸ್ತೆಯ ವ್ಯಾಪಾರ ಸಮುಚ್ಛಯದಲ್ಲಿ ಕಾರ್ಯಾಚರಿಸುತ್ತಿದ್ದ ಆರರಷ್ಟು ಕಚೇರಿಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಈ ಬಗ್ಗೆ ಗುಪ್ತಚರ ವಿಭಾಗ ತನಿಖೆ ಆರಂಭಿಸಿದೆ.
ಶನಿವಾರ ಸಂಜೆ ವೇಳೆ ಕಟ್ಟಡದ ಎರಡು ಅಂತಸ್ತುಗಳಲ್ಲಿ ಕಾರ್ಯಾಚರಿಸುತ್ತಿದ್ದ ಕಚೇರಿಗಳನ್ನು ಮುಚ್ಚಲಾಗಿದೆ. ಕಚೇರಿಯ ಹೊಣೆಗಾರಿಕೆಯುಳ್ಳವರು ಶುಕ್ರವಾರ ರಾತ್ರಿ ತಲುಪಿ ಸಂಸ್ಥೆಯ ಬೋರ್ಡ್ಗಳ ಸಹಿತ ಕಳಚಿ ತೆಗೆದಿರುವುದಾಗಿ ಮಾಹಿತಿಯಿದೆ. ಫೇಸ್ ಕ್ರೀಮ್ ಉಪಯೋಗಿಸಿದ ಹಿನ್ನೆಲೆಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಮೂತ್ರಪಿಂಡ ಸಂಬಂಧ ರೋಗ ಬಾಧಿಸಿದ ಘಟನೆ ರಾಜ್ಯದಲ್ಲಿ ವರದಿಯಾದ ಬೆನ್ನಲ್ಲೇ ಕುಂಬಳೆಯ ಸಂಸ್ಥೆಯನ್ನು ಮುಚ್ಚುಗಡೆಗೊಳಿಸಲಾಗಿದೆ. ಇಲ್ಲಿ ೫೦ರಷ್ಟು ಯುವತಿಯರು ಕೆಲಸ ನಿರ್ವಹಿಸುತ್ತಿದ್ದರು. ಹೆಚ್ಚಿನ ವೇತನ, ಕಮಿಶನ್ನ ಭರವಸೆ ನೀಡಿ ಇವರನ್ನು ಟೆಲಿಕಾಲರ್ಗಳಾಗಿ ನೇಮಿಸಲಾ ಗಿತ್ತು. ಕಾರ್ಪೊರೇಟ್ ಆಫೀಸ್ ಮಾದರಿಯಲ್ಲಿ ಕಾರ್ಯಾಚರಿಸಿದ್ದ ಸಂಸ್ಥೆಯಲ್ಲಿ ಫೇಸ್ ಕ್ರೀಮ್ ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಆನ್ಲೈನ್ ಮೂಲಕ ಮಾತ್ರವೇ ಕ್ರೀಮ್ಗಳ ಮಾರಾಟ ನಡೆಯುತ್ತಿತ್ತು. ಎಫ್ಫ್ಯೂನ್ ಕ್ರೀಮ್ನ ರಖಂ ವಿತರಣೆ ಪಾಲುದಾರರಾಗಿ ಕಂಪೆನಿಯ ವೆಬ್ಸೈಟ್ನಲ್ಲಿ ನೀಡಲಾಗಿರುವುದು ಕುಂಬಳೆಯ ಸಂಸ್ಥೆಗೆ ಸಂಬಂಧಪಟ್ಟ ಫೋನ್ ನಂಬ್ರವಾಗಿದೆಯೆಂಬ ಮಾಹಿತಿ ಇದೆ. ಈ ಮಧ್ಯೆ ಮಲಪ್ಪುರಂನ ಓರ್ವೆ ಬಾಲಕಿಗೆ ಮೂತ್ರಪಿಂಡ ರೋಗಕ್ಕೆ ಕಾರಣವಾದ ಮರ್ಕ್ಯುರಿ ಬೆರೆತ ಫೇಸ್ ಕ್ರೀಂನ ಕಸ್ಟಮರ್ ಕೇರ್ ನಂಬ್ರ ಕಾಸರಗೋಡಿನ ಓರ್ವೆ ಯುವತಿಯದ್ದಾಗಿದೆಯೆಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಆದರೆ ಯುವತಿಯ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಫೋನ್ ನಂಬ್ರಕ್ಕೆ ಕುಂಬಳೆಯ ಸಂಸ್ಥೆಯೊಂದಿಗೆ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕಂಪೆನಿಯ ಚಟುವಟಿಕೆಗಳು ಹಾಗೂ ಮಾರಾಟವಾದ ಸೌಂದರ್ಯವರ್ಧಕ ಸಾಮಗ್ರಿಗಳ ಮೂಲ, ಆರೋಗ್ಯ ಸಮಸ್ಯೆಗಳಲ್ಲಿ ಇವುಗಳ ನಂಟು ಮೊದಲಾದವುಗಳ ಕುರಿತು ತನಿಖೆ ಯಲ್ಲಿ ಬೆಳಕಿಗೆ ಬರಲಿದೆಯೆಂದು ನಿರೀಕ್ಷಿಸಲಾಗಿದೆ.






