ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆಯಿಂದ ವಯರ್ ಹಾಗೂ ಕೇಬಲ್ ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿದ್ಯಾನಗರ ಠಾಣೆ ಎಸ್ಐ ವಿಜಯನ್ ಮೇಲೋತ್ತ್ ನೇತೃತ್ವದ ತಂಡ ಬಂಧಿಸಿದೆ. ಪಳ್ಳಿಕ್ಕೆರೆ ಕಿಳಕ್ಕೇಕರ ತೊಟ್ಟಿ ನಿವಾಸಿ ರತೀಶ್ ಟಿ.ಎಫ್ (36) ಮತ್ತು ಪಳ್ಳಿಕ್ಕೆರೆ ಕೀಕಾನ ಕೂಟಕ್ಕನಿ ನಿವಾಸಿ ಕರುಣಾಕರನ್ ಕೆ.ಎ (64) ಬಂಧಿತ ಆರೋಪಿಗಳು.
ತೆಕ್ಕಿಲ್ ಬೇವಿಂಜೆಯ ಅರಫಾ ಮಂಜಿಲ್ನ ಎಂ.ಟಿ. ಅಬ್ದುಲ್ ಕಬೀರ್ ಎಂಬಿವರ ನಿರ್ಮಾಣ ಹಂತದಲ್ಲಿರುವ ಮನೆಯಿಂದ ಸೆ. 17ರಿಂದ 18ರ ನಡುವಿನ ಸಮಯದಲ್ಲಿ ವಯರ್ ಮತ್ತು ಕೇಬಲ್ ಸೇರಿದಂತೆ ಒಟ್ಟು ಮೂರು ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ನಡೆಸಲಾಗಿತ್ತು. ಇದರಂತೆ ಈ ಇಬ್ಬರು ಆರೋಪಿಗಳ ವಿರುದ್ದ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧಿತರನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆರೋಪಿಗಳನ್ನು ಸೆರೆಹಿಡಿದ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳಾದ ಹರೀಶ್ ಮತ್ತು ಪ್ರಜಿತ್ ಎಂಬಿವರಿದ್ದರು.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ಬೇರೊಂದು ಕಳವು ಪ್ರಕರಣ ದಾಖಲುಗೊಂಡಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.






