ಕುಂಬಳೆ: ಮುಟ್ಟಂ ರೈಲ್ವೇ ಗೇಟ್ ಸಮೀಪ ನಿಲ್ಲಿಸಿದ್ದ ಕಾರಿನಿಂದ 2,97,500 ರೂ. ಹಾಗೂ 1.8 ಗ್ರಾಂ ಎಂಡಿಎಂಎ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಶಿರಿಯ ಬತ್ತೇರಿಯ ಬತ್ತೇರಿ ಮಹಲ್ನ ಅಬ್ದುಲ್ಲ ಅನ್ಸಾದ್ (26) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲ್ನೋಟದಲ್ಲಿರುವ ನಾರ್ಕೋಟಿಕ್ ಸೆಲ್ ಡಾನ್ಸಾಪ್ ಟೀಂ ಹಾಗೂ ಕುಂಬಳೆ ಪೊಲೀಸರು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ಅನ್ಸಾದ್ ವಿರುದ್ಧ ಮಂಜೇಶ್ವರ ಹಾಗೂ ವಿದ್ಯಾನಗರದಲ್ಲಿ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಶಿರಿಯ ಮುಟ್ಟಂ ರೈಲ್ವೇ ಗೇಟ್ ಸಮೀಪ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಪೊಲೀಸರು ತಪಾಸಣೆ ನಡೆಸಿದಾಗ ಹಣ ಹಾಗೂ ಮಾದಕವಸ್ತು ಪತ್ತೆಯಾಗಿದೆ. ಅಲ್ಲದೆ ಕಾರು, ಮೊಬೈಲ್ ಫೋನ್ನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಫೋನ್ನಲ್ಲಿ ಮಾದಕವಸ್ತು ವ್ಯವಹಾರಕ್ಕೆ ಸಂಬಂಧಪಟ್ಟು ಪ್ರಧಾನ ಮಾಹಿತಿಗಳಿರುವುದಾಗಿ ಪೊಲೀಸರು ಅಂದಾಜಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆಗಾಗಿ ಮೊಬೈಲ್ ಪೋನ್ನ್ನು ಸೈಬರ್ಸೆಲ್ಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಂಬಳೆ ಎಸ್ಐ ಅನೂಪ್ ಈ ಪ್ರಕರಣದ ತನಿಖೆ ನಡೆಸಲಿದ್ದಾರೆ.






