ಕಾಸರಗೋಡು: ಕಾಸರಗೋಡು ನಗರದ ಐಡೆಡ್ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೈದ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಕಾರಣಕರ್ತರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಬಂಧಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೊಂದಿಗೆ ಒತ್ತಾಯಿಸಿದ್ದಾರೆ.
೧೦ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗೆ ಓರ್ವೆ ಅಧ್ಯಾಪಿಕೆ ಶಿಕ್ಷಣಕ್ಕೆ ಸಂಬಂಧಪಟ್ಟು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿ ನಿರಂತರ ಮಾನಸಿಕವಾಗಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಯ ಹೆತ್ತವರನ್ನು ಪದೇ ಪದೆ ಶಾಲೆಗೆ ಕರೆಸಿ ಅವರನ್ನೂ ಅವಮಾನಿಸಿರುವು ದಾಗಿಯೂ ದೂರಲಾಗಿದೆ. ಪ್ರಸ್ತುತ ವಿದ್ಯಾರ್ಥಿಯ ಹೆಸರೆತ್ತಿ ಇತರ ಮಕ್ಕಳ ರಕ್ಷಕರ ಮುಂದೆ ಈ ಬಾಲಕನನ್ನು ಅವಮಾನಿಸಲಾಗಿದೆ. ಕಳೆದ ಶಾಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಪೈಂಟಿಂಗ್ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಈ ವಿದ್ಯಾರ್ಥಿಯ ಫೋಟೋವನ್ನು ಕೂಡಾ ತರಗತಿಯ ವಾಟ್ಸಾಪ್ ಗ್ರೂಪ್‌ನಲ್ಲಿ ಹಾಕಲಿಲ್ಲ. ನಿರಂತರ ಕಿರುಕುಳ ಎದುರಿಸಬೇಕಾಗಿ ಬಂದ ಹಿನ್ನೆಲೆಯಲ್ಲಿ ಬಾಲಕ ಸಾವಿಗೆ ಶರಣಾದರೂ ಆ ಬಗ್ಗೆಯೂ ವಾಟ್ಸಪ್ ಗ್ರೂಪ್‌ನಲ್ಲಿ ಬಹಿರಂಗಪಡಿಸಿಲ್ಲ. ವಿದ್ಯಾರ್ಥಿಗೆ ಅಂತಿಮ ನಮನ ಸಲ್ಲಿಸಲು ಶಾಲೆಯಿಂದ ಇತರ ಅಧ್ಯಾಪಕರು ಬಂದರೂ ಆರೋಪಕ್ಕೆಡೆಯಾದ ಅಧ್ಯಾಪಿಕೆ ಅಲ್ಲಿಗೆ ಬರಲಿಲ್ಲವೆಂದೂ ದೂರಲಾಗಿದೆ. ಇದೇ ಶಾಲೆಯ ಇತರ ರಕ್ಷಕರೂ ಅಧ್ಯಾಪಿಕೆ ವಿರುದ್ಧ ಆರೋಪ ಹೊರಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇಂತಹ ಕೆಟ್ಟ ಅನುಭವ ಇನ್ನು ಮುಂದೆ ಉಂಟಾಗದಿರಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದೂ ದೂರುಗಾರರು ಆಗ್ರಹಿಸಿದ್ದಾರೆ.






