ರೈಲಿನಲ್ಲಿ ಎಂಡಿಎಂಎ ಸಾಗಾಟ: ಮತ್ತೆ ಇಬ್ಬರ ಸೆರೆ

ಕಾಸರಗೋಡು: ರೈಲಿನಲ್ಲಿ ಮಾದಕದ್ರವ್ಯವಾದ 665.67 ಗ್ರಾಂ ಮಾದಕದ್ರವ್ಯವಾದ ಎಂಡಿಎಂಎ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಮಂಗಲ್ಪಾಡಿ ಸೋಂಕಾಲು ಪ್ರತಾಪನಗರದ ನಿವಾಸಿಗಳಾದ ಯೂಸುಫ್ ಅಪ್ಸಲ್ (35) ಮತ್ತು  ನೌಶಾದಲಿ (40) ಬಂಧಿತ ಆರೋಪಿಗಳಾಗಿದ್ದಾರೆ. ನೀಲೇಶ್ವರ ಪೊಲೀಸ್ ಠಾಣೆಯ ಎಸ್‌ಐ ಸಿ.ಎಂ. ಸಾಬುರ ನೇತೃತ್ವದ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಮಂಗಲ್ಪಾಡಿ ಪ್ರತಾಪ್‌ನಗರ ಸೋಂಕಾಲಿನ ನಿವಾಸಿಗಳಾದ ಪಿ.ಎಚ್. ಅಹಮ್ಮದ್ ರುಕ್ಸಾದ್ (33) ಮತ್ತು ಅಬ್ದುಲ್ ಹಮೀದ್ (30)ರನ್ನು ಪೊಲೀಸರು ಮೊನ್ನೆ ನೀಲೇಶ್ವರ ರೈಲು ನಿಲ್ದಾಣ ಪರಿಸರದಿಂದ ಬಂಧಿಸಿ ಅವರ ಕೈವಶವಿದ್ದ 665.67 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ಇವರು ಮುಂಬೈಯಿಂದ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದು ನೀಲೇಶ್ವರ ರೈಲು ನಿಲ್ದಾಣದಲ್ಲಿ  ಇಳಿದು ಅಲ್ಲೇ ಪಕ್ಕದ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವೇಳೆ ಅವರನ್ನು ಮಾಲುಸಹಿತ ಪೊಲೀಸರು ಬಂಧಿಸಿದ್ದರು. ಪೊಲೀಸರು ಬಳಿಕ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ದಂಧೆಯಲ್ಲಿ ಯೂಸುಫ್ ಅಪ್ಸಲ್ ಮತ್ತು ನೌಶಾದಲಿ ಶಾಮೀಲಾದ ಬಗ್ಗೆ ಮಾಹಿತಿ ಲಭಿಸಿತ್ತೆಂದೂ ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಆ ಇಬ್ಬರು ಆರೋಪಿಗಳನ್ನು ನಂತರ ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ದಂಧೆಯಲ್ಲಿ ಇತರ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾದಕದ್ರವ್ಯದ ಮೂಲ ಪಂಜಾಬ್ ಆಗಿದೆ. ಅಲ್ಲಿಂದ ಅದನ್ನು ಮುಂಬೈಗೆ ಸಾಗಿಸಲಾಗುತ್ತಿದೆ. ನಂತರ ಮಾದಕದ್ರವ್ಯ ತಂಡದವರು ಅದನ್ನು ಮುಂಬೈಯಿಂದ ಪಡೆದು ರೈಲು ಇತ್ಯಾದಿಗಳ ಮೂಲಕ ಕೇರಳ, ಕರ್ನಾಟಕ ಮೊದಲಾದೆಡೆಗಳಿಗೆ ಸಾಗಿಸುತ್ತಿದ್ದಾರೆಂದೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

RELATED NEWS

You cannot copy contents of this page