ಕಾಸರಗೋಡು: ದುಬೈಯಲ್ಲಿ ವ್ಯಾಪಾರದ ಹೆಸರಲ್ಲಿ ಕಾಸರಗೋಡು ನಿವಾಸಿ ಹಾಗೂ ಅವರ ಸಂಬಂಧಿಕ ಸಂಸ್ಥೆಯಿಂದ ನಕಲಿ ಮೊಹರು ಉಪಯೋಗಿಸಿ ೩೮ ಕೋಟಿ ರೂಪಾಯಿಗಳ ವಂಚನೆ ನಡೆಸಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಹಾಗೂ ಈಗ ಚೆರ್ಕಳ ಬಾಲನಡ್ಕದಲ್ಲಿ ವಾಸಿಸುವ ಅಬ್ದುಲ್ ರೌಫ್ ಎನ್.ಎ. (46) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಕಲ್ಲಿಕೋಟೆ ಚುಂಡನ್ ಕಂಡಿಯ ರಮೀಸ್, ಮಲಪ್ಪುರಂ ವಲಾಂಚೇರಿಯ ಯೂಸಫ್, ಕೋಟಯಂ ಈರಾಟು ಪೇಟೆಯ ನಿವಾಸಿಗಳಾದ ಸಜಿಲ್, ಫರೀದ್ ಮತ್ತು ತಿರುವನಂತಪುರ ಕಟ್ಟಕ್ಕಡದ ನಿಝಾಮ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2022 ಅಕ್ಟೋಬರ್ ೨೨ರಿಂದ ೨೦೨೩ ಅಕ್ಟೋಬರ್ 28ರ ನಡುವಿನ ಅವಧಿಯಲ್ಲಿ ದೆಹ್ರಾ ದುಬೈಯಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ರೌಫ್ ಆರೋಪಿಸಿದ್ದಾರೆ.
ದೆಹ್ರಾ ದುಬೈಯಲ್ಲಿ ನಾನು ಮತ್ತು ನನ್ನ ಸಂಬಂಧಿಕೆಯೋರ್ವರು ಪಾಲುದಾರಿಕೆಯೊಂದಿಗೆ ಮಿಲಿಯಮ್ ಗಿಫ್ಟ್ ಟ್ರೇಡಿಂಗ್ (ಎಲ್ಎಲ್ಸಿ) ಎಂಬ ಸಂಸ್ಥೆ ನಡೆಸುತ್ತಿದ್ದೆವೆಂದೂ, ಅಲ್ಲಿ ಐದು ಮಂದಿ ಆರೋಪಿಗಳು ವಂಚನೆ ನಡೆಸುವ ಉದ್ದೇಶದಿಂದ ನಮ್ಮ ಸಂಸ್ಥೆಯ ಪೈಡ್ ಸೀಲನ್ನು ನಕಲಿಯಾಗಿ ಸೃಷ್ಟಿಸಿ ನಮ್ಮ ಸಂಸ್ಥೆಗೆ ವಿವಿಧ ಸಮಯಗಳಲ್ಲಾಗಿ ಆಗಮಿಸಿ ರಖಂ ಆಗಿ ಐಫೋನ್ಗಳನ್ನು ಖರೀದಿಸಿ ಅದರ ಅಸಲಿ ಬಿಲ್ನ ಬದಲು ನಕಲಿ ಮೊಹರು ಲಗತ್ತಿಸಿದ ಬಿಲ್ನ ಸಂಸ್ಥೆಯ ಡೆಲಿವರೀ ಕೌಂಟರ್ನಲ್ಲಿ ನೀಡಿ ಐಫೋನ್ಗಳನ್ನು ಪಡೆದು, ಅದನ್ನು ದುಬೈಯಲ್ಲೇ ಮಾರಾಟ ಮಾಡಿ ನಮಗೆ ೩೮ ಕೋಟಿ ರೂಪಾಯಿಗಳ ಆರ್ಥಿಕ ನಷ್ಟ ಉಂಟುಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ರೌಫ್ ಆರೋಪಿಸಿದ್ದಾರೆ.






