ಹೈವೇ ಪಟ್ರೋಲಿಂಗ್ ವಾಹನ ಹಿಂಭಾಗಕ್ಕೆ ಕಾರು ಢಿಕ್ಕಿ: ಪೊಲೀಸರ ಸಹಿತ 5 ಮಂದಿಗೆ ಗಾಯ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುತ್ತಿದ್ದ ಪೊಲೀಸ್ ಇಲಾಖೆಯ ಹೈವೇ ಪಟ್ರೋಲಿಂಗ್ ವಾಹನದ ಹಿಂಭಾಗಕ್ಕೆ  ಅಪರಿಮಿತ ವೇಗದಲ್ಲಿ ಬಂದ ಆಂಧ್ರಪ್ರದೇಶ ನೋಂದಾಯಿತ ಕಾರು ಢಿಕ್ಕಿ ಹೊಡೆದು ನಾಲ್ವರು ಪೊಲೀಸರು ಸಣ್ಣ ಪುಟ್ಟ ಗಾಯಗೊಂಡು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಕೂಡಾ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಇಂದು ಮುಂಜಾನೆ 1.30ರ ವೇಳೆ ರಾಷ್ಟ್ರೀಯ ಹೆದ್ದಾರಿ ಶಿರಿಯಕುನ್ನು ಎಂಬಲ್ಲಿ ಅಪಘಾತವುಂಟಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್‌ನ ಪಟ್ರೋಲಿಂಗ್ ವಾಹನ ತಲಪಾಡಿಯಿಂದ ಕಾಸರಗೋಡಿಗೆ ಬರುತ್ತಿದ್ದಾಗ ಮಂಗಳೂರು ಭಾಗದಿಂದ ಕುಂಬಳೆ ಭಾಗಕ್ಕೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಪೊಲೀಸ್ ವಾಹನದ ಹಿಂಬದಿಯ ಒಂದು  ಭಾಗ ಮತ್ತು ಕಾರಿನ ಮುಂದುಗಡೆ ಭಾಗ ನಜ್ಜುಗುಜ್ಜಾಗಿದೆ. ಪಟ್ರೋಲಿಂಗ್ ವಾಹನದಲ್ಲಿದ್ದ ಎಸ್‌ಐ ರಾಘವನ್, ಪೊಲೀಸರಾದ ನಿಖಿಲ್ ಮನು, ವಿನು, ಚಾಲಕ ಸುಭಾಷ್ ಸಣ್ಣ ಪುಟ್ಟ ಗಾಯಗೊಂಡಿದ್ದು, ಅವರಿಗೆ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಕಾರು ಚಲಾಯಿಸಿದ ಮಂಗಳೂರು ನಿವಾಸಿ ವಿನೋದ್ ರಾಜ್ (36) ಎಂಬಾತನೂ ಸಣ್ಣ ಪುಟ್ಟ ಗಾಯಗಳೊಂದಿಗೆ ಭಾರೀ ಅನಾಹುತದಿಂದ ಅದೃಷ್ಟವಶಾತ್ ಪಾರಾಗಿದ್ದಾನೆ. ಕುಂಬಳೆ ಪೊಲೀಸರು  ಆ ಕಾರನ್ನು ವಶಕ್ಕೆ ತೆಗೆದು  ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page