ಕಾಸರಗೋಡು: ನಗರದ ಎಂ.ಜಿ ರಸ್ತೆಯಲ್ಲಿ ಸಾರಿಗೆ ಅಡಚಣೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಚಳವಳಿ ನಡೆಸಿದ ೨೫ ಮಂದಿ ವಿರುದ್ಧ ನಗರಸಭೆಯ ಅಧಿಕಾರಿಗಳ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿರುವು ದಾಗಿ ಜನಪರ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ವ್ಯಾಪಾರಿಯಾಗಿದ್ದ ಹನೀಫ್ ಎಂಬವರು ಸಾರಿಗೆ ಅಡಚಣೆಯಲ್ಲಿ ಸಿಲುಕಿ ಮೃತಪಟ್ಟ ರೀತಿಯ ಘಟನೆ ಪುನರಾವರ್ತಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜನಪರ ಅಭಿವೃದ್ಧಿ ಸಮಿತಿ ಮಾನವ ಸರಪಳಿ ಚಳವಳಿ ಹಾಗೂ ನಗರಸಭಾ ಕಚೇರಿಗೆ ಮಾರ್ಚ್ ನಡೆಸಿತ್ತು.ಅನಂತರ ನಗರಸಭಾ ಕಚೇರಿಗೆ ಮನವಿ ಸಲ್ಲಿಸಲು ತೆರಳಿದಾಗ ಅಲ್ಲಿ ಚೆಯರ್ಮೆನ್, ವೈಸ್ ಚೆಯರ್ಮೆನ್, ಸೆಕ್ರೆಟರಿ, ಸುಪರಿನ್ಟೆಂಡೆಂಟ್ ಎಂಬಿವರ ಕುರ್ಚಿಗಳು ಖಾಲಿಯಾಗಿದ್ದುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿದ್ದ ಓರ್ವ ನೌಕರನಲ್ಲಿ ಮನವಿ ನೀಡಲಾಗಿತ್ತು. ಇದರ ಎರಡು ವಾರಗಳ ನಂತರ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ಪೊಲೀಸರು ತಿಳಿಸಿದ್ದರು. ರಸ್ತೆ ತಡೆ ಸೃಷ್ಟಿಸಿರುವುದಾಗಿ ನಗರಸಭೆ ಅಧಿಕಾರಿಗಳು ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದರು.
ನಗರಸಭೆ ವಿರುದ್ದ ಕರ್ತವ್ಯಲೋಪ, ಭ್ರಷ್ಟಾಚಾರ ಆರೋಪ, ಕಟ್ಟಡ ನಿರ್ಮಾಣ ಕಡತಸೋರಿಕೆ, ಬೀದಿ ವ್ಯಾಪಾರ ಮೊದಲಾದ ಹಲವು ವಿಷಯಗಳಲ್ಲಿ ಜನರು ಸ್ಪಷ್ಟೀಕರಣ ಕೇಳುತ್ತಿದ್ದಾರೆ. ಅವುಗಳಿಗೆ ಉತ್ತರ ಹೇಳದೆ ಪ್ರಶ್ನೆ ಕೇಳುವವರ ವಿರುದ್ಧ ಸುಳ್ಳು ದೂರು ನೀಡಿ ಕೇಸು ದಾಖಲಿಸಿ ಕಿರುಕುಳ ನೀಡುವುದು ನಗರಸಭೆಯ ಉದ್ದೇಶವಾಗಿದ್ದರೆ ತೀವ್ರ ಪ್ರತಿಭಟನೆಗೆ ಜನಪರ ಸಮಿತಿ ಮುಂದಾಗಲಿ ದೆಯೆಂದು ಪದಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.






