3.37 ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಮಾದಕ ದ್ರವ್ಯವಾದ 3.37 ಗ್ರಾಂ ಎಂಡಿಎಂಎ ಸಹಿತ ಯುವಕನೋರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ಕಸಬಾ ಬೀಚ್‌ನ ಅಭಿಜಿತ್ ಪಿ. (26) ಬಂಧಿತ ಆರೋಪಿ. ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಮನು ಪಿ.ವಿ.ಯವರ ನೇತೃತ್ವದ ಪೊಲೀಸರು ನಿನ್ನೆ ಸಂಜೆ ಆರೋಪಿಯ ಮನೆಗೆ ದಾಳಿ ನಡೆಸಿ ಆ ಮನೆಯ ಬೆಡ್‌ರೂಮ್ ತಪಾಸಣೆ ಮಾಡಿದಾಗ ಅಲ್ಲಿದ್ದ ಬ್ಯಾಗ್‌ನೊಳಗೆ ಬಚ್ಚಿಡಲಾಗಿದ್ದ ಎಂಡಿಎಂಎ ಪತ್ತೆಯಾಗಿದೆ. ಅದರಂತೆ ಆತನನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಪೊಲೀಸರು ತೀವ್ರ ವಿಚಾರಿಸಿದಾಗ ಈ ಮಾಲನ್ನು ಮೊಗ್ರಾಲ್ ನಿವಾಸಿ ಕಬೀರ್ ಎಂಬಾತನಿಂದ ನಾನು ಪಡೆದಿರುವುದಾಗಿ ಆತ ತಿಳಿಸಿದ್ದಾನೆ. ಆರೋಪಿಯ ಮನೆಯಿಂದ 6020 ರೂ. ನಗದು ಹಾಗೂ ಕರ್ನಾಟಕ ಬ್ಯಾಂಕ್‌ನ ಎಟಿಎಂ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಎಸ್‌ಐ ಸುಭಾಷ್, ಸಿಪಿಒಗಳಾದ ರಾಗೇಶ್, ಸಿನೀಶ್, ಮತ್ತು ಅಂಜು ಎಂಬವರು ಒಳಗೊಂಡಿದ್ದರು. ಇನ್ಸ್‌ಪೆಕ್ಟರ್ ಮೆಲ್ವಿನ್ ಜೋಸ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

You cannot copy contents of this page