ನಕಲಿ ವಿದೇಶಿ ಸೌಂದರ್ಯವರ್ಧಕ ಮಾರಾಟ: ಡ್ರಗ್ಸ್ ಕಂಟ್ರೋಲ್ ಗುಪ್ತಚರ ತಂಡದಿಂದ  ಜಿಲ್ಲೆಯಾದ್ಯಂತ ವ್ಯಾಪಕ ದಾಳಿ, ತಪಾಸಣೆ

ಕಾಸರಗೋಡು: ನಕಲಿ ವಿದೇಶಿ ಸೌಂದರ್ಯವರ್ಧಕಗಳ  ಮಾರಾಟ ಪತ್ತೆಹಚ್ಚಲು ರಾಜ್ಯ ಡ್ರಗ್ಸ್ ಕಂಟ್ರೋಲ್ ಇಲಾಖೆಯ ಗುಪ್ತಚರ ವಿಭಾಗದ ವಿಶೇಷ ತಂಡ ಕಾಸರಗೋಡು ಜಿಲ್ಲೆಯಾದ್ಯಂತವಾಗಿ ನಿನ್ನೆಯಿಂದ ವ್ಯಾಪಕ ದಾಳಿ ಹಾಗೂ ಪರಿಶೀಲನೆ ಆರಂಭಿಸಿದೆ. ಇದರಂತೆ ಜಿಲ್ಲೆಯಲ್ಲಿ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ಹಲವು ವ್ಯಾಪಾರ ಸಂಸ್ಥೆಗಳಲ್ಲಿ ಮಾರಾಟಕ್ಕಾಗಿ ತಂದಿರಿಸಲಾಗಿದ್ದ ಹಲವು ಫೇಸ್‌ಕ್ರೀಮ್‌ಗಳ ಇತ್ಯಾದಿ ಸೌಂದರ್ಯವರ್ಧಕಗಳ ಸ್ಯಾಂಪಲ್‌ಗಳನ್ನು ಈ ತಂಡ ಸಂಗ್ರಹಿಸಿ ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. ಇಂತಹ ಪರೀಕ್ಷೆಯಲ್ಲಿ ಆರೋಗ್ಯಕ್ಕೆ ಹಾನಿಕರವಾಗಿರುವ ಮಾರಕ ರಾಸಾಯನಿಕ ಸಾಮಗ್ರಿಗಳು ಪತ್ತೆಯಾದಲ್ಲಿ ಅಂತಹ ಸಾಮಗ್ರಿಗಳನ್ನು ಮಾರಾಟ ಮಾಡುವ ಹಾಗೂ ಅವುಗಳನ್ನು ತಯಾರಿಸುವ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಗುಪ್ತಚರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಮ್ಮ ಇಲಾಖೆ ಭಾರೀ ಸಿಬ್ಬಂದಿಗಳ ಕೊರತೆ ಎದುರಿಸುತ್ತಿರುವುದರಿಂದಾಗಿ ಇಂತಹ ಕಾರ್ಯಾಚರಣೆಗೆ ಅಡಚಣೆಯಾಗಿ ಪರಿಣಮಿಸುತ್ತಿದೆ. ಆದರೂ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದೆಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಮಲಪ್ಪುರದ 17ರ ಹರೆಯದ  ವಿದ್ಯಾರ್ಥಿನಿ ಆನ್‌ಲೈನ್ ಮೂಲಕ ಖರೀದಿಸಿದ ಪಾಕಿಸ್ತಾನ ನಿರ್ಮಿತ ಎಫ್ ಟ್ಯೂನ್ ಫೇಸ್ ಕ್ರೀಮ್ ಬಳಸಿದ ಪರಿಣಾಮ ಅದು ಕಿಡ್ನಿಯಮೇಲೆ ಗಂಭೀರ ಪರಿಣಾಮ ಬೀರಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಂತಹ ನಕಲಿ ಫೇಸ್ ಕ್ರೀಮ್‌ಗಳನ್ನು ಪತ್ತೆಹಚ್ಚಿ ಅವುಗಳ ಮಾರಾಟ ತಡೆಗಟ್ಟುವ ಉದ್ದೇಶದಿಂದ ಡ್ರಗ್ಸ್ ಕಂಟ್ರೋಲರ್ ವಿಭಾಗ ಈ ಕಾರ್ಯಾಚರಣೆ ಆರಂಭಿಸಿದೆ. ಮಲಪ್ಪುರದ ವಿದ್ಯಾರ್ಥಿನಿಗೆ ಕಸ್ಟಮ್ಸ್ ಕೇರ್ ನಂಬ್ರದ ಸಹಾಯದಿಂದ ಆಕೆಗೆ ಆನ್‌ಲೈನ್ ಮೂಲಕ ಫೇಸ್ ಕ್ರೀಮ್ ಪೂರೈಸಿದ ಕಾಸರಗೋಡಿನ ಮಹಿಳೆಯ ವ್ಯವಹಾರದ ಬಗ್ಗೆಯೂ ಡ್ರಗ್ಸ್ ಕಂಟ್ರೋಲ್ ವಿಭಾಗ ಸಮಗ್ರ ತನಿಖೆ ಆರಂಭಿಸಿದೆ. ಇದರಂತೆ ಹೆಚ್ಚಿನ ತನಿಖೆಗಾಗಿ  ಆಕೆಗೆ ಈಗಾಗಲೇ ನೋಟೀಸ್ ಜ್ಯಾರಿಗೊಳಿಸಿದೆ. ಮಾತ್ರವಲ್ಲ ಈ ವ್ಯವಹಾರದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆಯೂ ಇನ್ನೊಂದೆಡೆ ಕೇಂದ್ರ ತನಿಖಾ ತಂಡಗಳೂ ತನಿಖೆ ಆರಂಭಿಸಿವೆ.

ಮಾರಕ ಫೇಸ್ ಕ್ರೀಮ್‌ಗಳನ್ನು ದುಬಾಯಿ ಮೂಲಕ ಕೇರಳ ಸೇರಿದಂತೆ ಪಾಕಿಸ್ತಾನ ಭಾರತದಲ್ಲಿ ವ್ಯಾಪಕವಾಗಿ ಮಾರಾಟ ಮಾಡುತ್ತಿದೆ. ಇದು ಪಾಕಿಸ್ತಾನ ಭಾರತದ ಮೇಲೆ ನಡೆಸುತ್ತಿರುವ ಒಂದು ಮಾರಕ ಜೈವಿಕ ದಾಳಿಯಾಗಿದೆ ಎಂಬ ರೀತಿಯ ಶಂಕೆಯನ್ನು ತನಿಖಾ ತಂಡಗಳು ವ್ಯಕ್ತಪಡಿಸಿವೆ.

RELATED NEWS

You cannot copy contents of this page