ಕಾಸರಗೋಡು: ಪಾಕಿಸ್ತಾನದಿಂದ ದುಬಾಯಿ ಮೂಲಕ ಕಾಸರಗೋಡು ಸೇರಿದಂತೆ ಕೇರಳದಾದ್ಯಂತ ನಕಲಿ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಕಳ್ಳಸಾಗಾಟ ಮೂಲಕ ಪೂರೈಸುತ್ತಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಇನ್ಸ್ಟಾಗ್ರಾಂ ಮೂಲಕ ಖರೀದಿಸಿದ ಅಪರಿಮಿತವಾಗಿ ಮರ್ಕ್ಯೂರಿ ಮಿಶ್ರಿತಗೊಂಡ ಎಫ್ ಟ್ಯೂನ್ ಎಂಬ ಹೆಸರಿನ ಕ್ರೀಮ್ ಉಪಯೋಗಿಸಿದ ಪರಿಣಾಮ ಮಲಪ್ಪುರಂ ನಿವಾಸಿಯಾದ ೧೭ರ ಹರೆಯದ ವಿದ್ಯಾರ್ಥಿನಿಯ ಕಿಡ್ನಿ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಆಕೆ ಆಸ್ಪತ್ರೆಗೆ ದಾಖಲುಗೊಂಡಿದ್ದಳು. ಈ ಹಿನ್ನೆಲೆಯಲ್ಲಿ ಮಲಪ್ಪುರಂ ಪೊಲೀಸರು ನಡೆಸಿದ ತನಿಖೆಯಲ್ಲಿ ಫೇಸ್ ಕ್ರೀಮ್ ಖರೀದಿಸಿದ ಕಸ್ಟಮ್ಸ್ ಕೇರ್ ನಂಬ್ರ ಕಾಸರಗೋಡು ನಿವಾಸಿಯಾಗಿರುವ ಮಹಿಳೆಯ ದ್ದಾಗಿದೆ ಎಂದು ಸ್ಪಷ್ಟಗೊಂಡಿದೆ.
ಈ ಮಹಿಳೆ ಇದೇ ನಂಬ್ರದಲ್ಲ್ಲಿ ಮಲಪ್ಪುರದ ವಿದ್ಯಾರ್ಥಿನಿಯನ್ನು ಹಲವು ಬಾರಿ ಸಂಪರ್ಕಿಸಿದ್ದಳೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ವ್ಯವಹಾರದ ಮಧ್ಯವರ್ತಿಯಾಗಿರುವ ಕಾಸರಗೋಡಿನ ಮಹಿಳೆಯ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ್ದು, ಅದರಂತೆ ಆ ಬಗ್ಗೆ ತನಿಖೆಗಾಗಿ ತಮ್ಮ ಮುಂದೆ ಹಾಜರಾಗುವಂತೆ ಆಕೆಗೆ ಪೊಲೀಸರು ನೋಟೀಸು ಜ್ಯಾರಿಗೊಳಿಸಿದ್ದಾರೆ. ಮಾತ್ರವಲ್ಲ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸಲಾಗಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಶಾಮೀಲಾಗಿದ್ದಾರೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಂಗೀಕಾರವಿಲ್ಲದ ಸೌಂದರ್ಯವರ್ಧಕ ಸಾಮಗ್ರಿಗಳು ಹಾಗೂ ನಕಲಿ ಪ್ರೊಟೀನ್ ಪೌಡರ್ಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುವುದನ್ನು ತಡೆಗಟ್ಟಲು ರಾಜ್ಯ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಆರಂಭಿಸಿದೆ. ಇಂತಹ ಸಾಮಗ್ರಿಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಲೈಸನ್ಸ್ ಖಾಯಂ ರದ್ದುಪಡಿಸುವ ನಿರ್ದೇಶವನ್ನು ಇಲಾಖೆ ನೀಡಿದೆ. ಮಾತ್ರವಲ್ಲ ರಾಜ್ಯ ಡ್ರಗ್ಸ್ ಕಂಟ್ರೋಲರ್ರ ನಿರ್ದೇಶ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ದಾಳಿ ಮತ್ತು ಪರಿಶೀಲನೆ ಆರಂಭಿಸಲಾಗಿದೆ.
ಆರೋಗ್ಯಕ್ಕೆ ಹಾನಿಕರವಾದ ಇಂತಹ ಮಾರಕ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಪಾಕಿಸ್ತಾನದಲ್ಲಿ ತಯಾರಿಸಿ ಅದನ್ನು ದುಬಾಯಿ ಮೂಲಕ ಕಾಸರಗೋಡು ಸೇರಿದಂತೆ ಕೇರಳದಾದ್ಯಂತ ಆನ್ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಮಾತ್ರವಲ್ಲದೆ ಕೆಲವು ಅಂಗಡಿಗಳಲ್ಲೂ ಇಂತಹ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆಯೆಂಬ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭಿಸಿದೆ.





