ಮಾಡ ಅಂಗನವಾಡಿ ಆವರಣಗೋಡೆ ದುರಸ್ತಿಗೆ ತಡೆ: ಹಿಂದೂ ರುದ್ರಭೂಮಿ ಸಮಿತಿ ಸದಸ್ಯರ ಸಹಿತ ೫೫ ಮಂದಿ ವಿರುದ್ಧ ಕೇಸು

ಮಂಜೇಶ್ವರ: ಉದ್ಯಾವರ ಮಾಡದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮೀಪದಲ್ಲಿರುವ ಅಂಗನವಾಡಿಗೆ ಆವರಣಗೋಡೆ ದುರಸ್ತಿಗೆ ನಾಗರಿಕರು ಹಾಗೂ  ಹಿಂದೂ ರುದ್ರಭೂಮಿ ಸಮಿತಿಯವರು ತಡೆಯೊಡ್ಡಿದ ಘಟನೆ ನಿನ್ನೆ ನಡೆದಿದೆ. ನಾಗರಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಮಗಾರಿಗೆ ಮಂಜೇಶ್ವರ ಪೊಲೀಸರು ತಡೆಯೊಡ್ಡಿದ್ದು ಇದೇ ವೇಳೆ ಪ್ರತಿಭಟನೆ ನಡೆಸಿದ ರುದ್ರಭೂಮಿ  ಸಮಿತಿ ಹಾಗೂ ಸ್ಥಳೀಯರಾದ ೫೫ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮಾಡದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ೨.೭೦ ಎಕ್ರೆ ಸ್ಥಳವಿದ್ದು ಅದರ ಸಮೀಪದಲ್ಲೇ ಅಂಗನವಾಡಿ ಕಾರ್ಯಾ ಚರಿಸುತ್ತಿದೆ. ಈ ರುದ್ರಭೂಮಿಯ ಒತ್ತುವರಿ ತೆರವುಗೊಳಿಸಿ ಅದಕ್ಕೆ ಆವರಣಗೋಡೆ ನಿರ್ಮಿಸುವಂತೆ ಕೇರಳ ಹೈಕೋರ್ಟ್ ಈ ಹಿಂದೆ ಆದೇಶ ನೀಡಿದೆಯೆಂದೂ ಆದರೆ ನ್ಯಾಯಾಲಯದ ನಿರ್ದೇಶವನ್ನು ಪಾಲಿಸದೆ ಪಂಚಾಯತ್ ಅಂಗನವಾಡಿ ಆವರಣಗೋಡೆ ದುರಸ್ತಿಗೆ ಮುಂದಾಗಿರುವುದು ಸರಿಯಲ್ಲವೆಂದು ತಿಳಿಸಿ  ರುದ್ರಭೂಮಿ ಸಮಿತಿ ಹಾಗೂ ನಾಗರಿಕರು ಕಾಮಗಾರಿಗೆ ತಡೆಯೊಡ್ಡಿದ್ದಾರೆ. ನಿನ್ನೆ ಬೆಳಿಗ್ಗೆ ಅಂಗನವಾಡಿಯ ಆವರಣಗೋಡೆ ದುರಸ್ತಿ ಕಾಮಗಾರಿ ಆರಂಭಿಸಲಾಗಿತ್ತು. ಈ ವಿಷಯ ತಿಳಿದು ಸ್ಥಳೀಯರು ಹಾಗೂ ರುದ್ರಭೂಮಿ ಸಮಿತಿಯ ಸದಸ್ಯರು ಸ್ಥಳಕ್ಕೆ ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಈ ವೇಳೆ ಉದ್ರಿಕ್ತ ಸ್ಥಿತಿ ಸೃಷ್ಟಿಯಾಗಿದ್ದು, ವಿಷಯ ತಿಳಿದು ಮಂಜೇಶ್ವರ ಪೊಲೀಸರು ಅಲ್ಲಿಗೆ ತಲುಪಿದ್ದರು.

ಬಳಿಕ ರುದ್ರಭೂಮಿ ಸಮಿತಿ  ಸದಸ್ಯರು ಹಾಗೂ ಸ್ಥಳೀಯ ರೊಂದಿಗೆ ಪೊಲೀಸರು ಸಮಾಲೋಚನೆ ನಡೆಸಿದ್ದು, ಇದರಂತೆ ಕಾಮಗಾರಿ ನಿಲ್ಲಿಸು ವಂತೆ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಂಗನವಾಡಿಯ ಆವರಣಗೋಡೆ ದುರಸ್ತಿ ವಿರೋಧಿಸಿ ಗುಂಪುಸೇರಿ ಸ್ಥಳದಲ್ಲಿ ಸಮಸ್ಯೆ ಸೃಷ್ಟಿಸಿದರೆಂದು ಆರೋಪಿಸಿ ಹಿಂದೂ ರುದ್ರಭೂಮಿ ಸದಸ್ಯರು ಹಾಗೂ ಸ್ಥಳೀಯರಾದ ಕಯ್ಯಾರಿನ ಲೋಕೇಶ್ ನೋಂಡ, ಮಾಡದ ಋತಿಕ್,   ಭೂಷಣ್, ಜಯರಾಮ, ಶ್ರೇಯಸ್ಸ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ೫೦ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page