ಕುಂಬಳೆ: ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ 42 ಪವನ್ ಚಿನ್ನಾಭರಣ ಹಾಗೂ 25,000 ರೂಪಾಯಿಗಳನ್ನು ದರೋಡೆಗೈದ ಪ್ರಕರಣದ ಆರೋಪಿಗಳಲ್ಲೋರ್ವನನ್ನು ಬಂಧಿಸಲಾಗಿದೆ. ಕರ್ನಾಟಕದ ಸಾಂಬಿಯ ಅಸೀಸ್ ಯಾನೆ ಅಬ್ದುಲ್ ಅಸೀಸ್ (58) ಎಂಬಾತನನ್ನು ಇಂದು ಬೆಳಿಗ್ಗೆ ಪುತ್ತೂರಿನಿಂದ ಬಂಧಿಸಲಾಗಿದೆ.
2012 ಡಿಸೆಂಬರ್‌ನಲ್ಲಿ ನಡೆದ ಈ ದರೋಡೆ ಪ್ರಕರಣದ ಆರೋಪಿಯಾದ ಅಬ್ದುಲ್ ಅಸೀಸ್‌ನನ್ನು ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಮಧುಸೂದನನ್ ನಾಯರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲು ಸಾಧ್ಯವಾಗಿದೆ.
ಮಂಗಳೂರಿನಲ್ಲಿ ಟ್ರಾನ್ಸ್‌ಪೋರ್ಟ್ ಆಪರೇಟರ್ ಆಗಿದ್ದ ಕುಂಬಳೆಯ ಅನಿಲ್ ಕುಂಬಳೆ ರಸ್ತೆ ಬಳಿಯ ಕೃಪಾನುಗ್ರಹ ನಿವಾಸ್‌ನ ರಾಜೇಶ್ ಶೆಣೈ ಎಂಬವರ ಮನೆಯಿಂದ ನಗನಗದು ದರೋಡೆ ನಡೆಸಲಾಗಿತ್ತು. 2012 ಡಿಸೆಂಬರ್ 22ರಂದು ರಾತ್ರಿ 7.45ರ ವೇಳೆ 8 ಮಂದಿಯ ದರೋಡೆ ತಂಡ ಮನೆಯ ಆವರಣಗೋಡೆ ಹಾರಿ ಮಾರಕಾಯುಧಗಳೊಂದಿಗೆ ರಾಜೇಶ್ ಶೆಣೈ ಅವರ ಮನೆಗೆ ನುಗ್ಗಿತ್ತು. ಬಳಿಕ ರಾಜೇಶ್ ಶೆಣೈ ಅವರ ಮುಖಕ್ಕೆ ಅಮಲು ಬರಿಸುವ ದ್ರಾವಣವನ್ನು ಸಿಂಪಡಿಸಿದ ತಂಡ ಅವರನ್ನು ಪ್ರಜ್ಞೆ ತಪ್ಪಿಸಿತ್ತು. ಬಳಿಕ ತಂಡ ಮನೆಮಂದಿಯ ಕೈಗಳನ್ನು ಕಟ್ಟಿಹಾಕಿ ಅವರ ಬಾಯಿಗೆ ಪ್ಲಾಸ್ಟರ್ ಬಿಗಿದಿತ್ತು. ಅನಂತರ ರಾಜೇಶ್ ಶೆಣೈಯವರ ಪತ್ನಿ ಅನುಷಾ ಶೆಣೈ ಅವರ ಕೈಗಳಲ್ಲಿದ್ದ ಎರಡು ಚಿನ್ನದ ಬಳೆಗಳು, ಎರಡು ಉಂಗುರ, ತಾಯಿ ರೋಹಿಣಿ ಶೆಣೈಯವರ ಕೈಯಲ್ಲಿದ್ದ ನಾಲ್ಕು ಬಳೆಗಳು, ಸರ, ಚಿಕ್ಕಮ್ಮ ಸುನಿತಾ ಶೆಣೈಯವರ ಎರಡು ಬಳೆಗಳು, ಸಹೋದರಿ ಶಾಂತಲಾ ಶೆಣೈಯವರ ಕುತ್ತಿಗೆಯಲ್ಲಿದ್ದ ಎರಡು ನೆಕ್ಲೆಸ್, ಎರಡು ಬಳೆಗಳು, ದೊಡ್ಡಮ್ಮ ರಾಧಾ ಪೈಯವರ ಕೈಯಲ್ಲಿದ್ದ ಎರಡು ಬಳೆಗಳು, ಒಂದು ಸರ ಸೇರಿದಂತೆ ಒಟ್ಟು 42 ಪವನ್ ಚಿನ್ನಾಭರಣಗಳನ್ನು ತಂಡ ದರೋಡೆಗೈದಿತ್ತು. ರಾಜೇಶ್ ಶೆಣೈಯವರ ತಂದೆ ವಿಠಲ ಶೆಣೈ ಮತ್ತು ಮಕ್ಕಳು ಸೇರಿದಂತೆ ಮನೆಯಲ್ಲಿದ್ದ ಎಲ್ಲರನ್ನೂ ಆ ದರೋಡೆಕೋರರು ಕಟ್ಟಿಹಾಕಿದ್ದರು. ಚಿನ್ನಾಭರಣಗಳನ್ನು ದರೋಡೆ ನಡೆಸಿದ ತಂಡ ಕಪಾಟಿನಲ್ಲಿದ್ದ ೨೫ ಸಾವಿರ ರೂಪಾಯಿಗಳನ್ನು ತೆಗೆದು ಪರಾರಿಯಾಗಿತ್ತು. ಅಂದು ರಾತ್ರಿ 9 ಗಂಟೆಗೆ ರಾಜೇಶ್ ಶೆಣೈಯವರ ಸಂಬಂಧಿಕರಾದ ಡಾ. ವಾಣಿ ಎಂಬವರು ಆ ಮನೆಗೆ ಬಂದಾಗಲೇ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ವಿಷಯ ತಿಳಿದುಬಂದಿತ್ತು.
2012ರಲ್ಲಿ ನಡೆದ ಈ ದರೋಡೆ ಕೃತ್ಯದ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಹಲವು ಕಾಲದಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ದರೋಡೆ ತಂಡದಲ್ಲಿ ಒಳಗೊಂಡಿದ್ದ ಸಾಂಬಿಯಾ ಅಸೀಸ್ ಯಾನೆ ಅಬ್ದುಲ್ ಅಸೀಸ್ ಕರ್ನಾಟಕದ ಪುತ್ತೂರಿನಲ್ಲಿದ್ದಾನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್ಪಿ ಮಧುಸೂದನನ್ ನಾಯರ್ ನೇತೃತ್ವದ ತಂಡ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಶ್ರೀಕುಮಾರ್, ಸಂಜಯನ್, ಎಸ್‌ಐಗಳಾದ ರವೀಂದ್ರನ್, ಪ್ರಮೋದ್, ವಿನೋದ್, ಗೋಪನ್, ಪೊಲೀಸರಾದ ರಾಜೀವನ್, ಪ್ರದೀಪನ್, ರಾಜೇಶ್, ರಂಜಿತ್ ಎಂಬಿವರಿದ್ದರು.






