ಬಂದಡ್ಕ: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಆತ್ಮಹತ್ಯಾ ಯತ್ನ ನಡೆದಿದೆ. ಉನ್ನತಿಯಲ್ಲಿ ವಾಸ ಮಾಡುತ್ತಿದ್ದ 16ರ ಹರೆಯದ ಬಾಲಕ ಇಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವಿಸಿದ್ದಾನೆಂಬ ಮಾಹಿತಿ ತಿಳಿದ ಕೂಡಲೇ ನಿನ್ನೆ ಬೆಳಿಗ್ಗೆ ಬಾಲಕನನ್ನು ಬೇಡಡ್ಕ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಡಾಕ್ಟರ್ ನಡೆಸಿದ ತಪಾಸಣೆಯಲ್ಲಿ ಇಲಿ ವಿಷ ಹೊಟ್ಟೆಯೊಳಗೆ ಸೇರಿರುವುದನ್ನು ಖಚಿತಪಡಿಸಲಾಯಿತು. ಆ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಬೇಡಗಂ ತೋರೋತ್ ನಿವಾಸಿ ಟಿ. ಅನಶ್ವರ (19) ಎರಡು ದಿನದ ಹಿಂದೆ ಇಲಿ ವಿಷ ಸೇವಿಸಿ ಆತ್ಮಹತ್ಯೆ ಗೈದಿದ್ದಳು. ಪ್ಲಸ್ ಟು ಕಲಿಕೆ ಮುಗಿಸಿ ಮುಂದಿನ ಶಿಕ್ಷಣಕ್ಕೆ ಸಿದ್ಧತೆ ನಡೆಸುತ್ತಿದ್ದ ಮಧ್ಯೆ ಅನಶ್ವರ ಆತ್ಮಹತ್ಯೆಗೈದಿದ್ದಾಳೆ. ಆತ್ಮಹತ್ಯೆಗೆ ಕಾರಣವೇನೆಂದು ಇನ್ನೂ ಸ್ಪಷ್ಟಗೊಂಡಿಲ್ಲ. ತೋರೋತ್ ನಿವಾಸಿ ಹಾಗೂ ಒಂದು ಮಗುವಿನ ತಾಯಿ ಯಾದ ೩೨ರ ಹರೆಯದ ಮಹಿಳೆ ಎರಡು ದಿನದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ನಾನದ ಕೊಠಡಿಯಲ್ಲಿ ಕೈಯ ನರ ತುಂಡುಮಾಡಿದ ಬಳಿಕ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈಕೆ ಈಗಲೂ ಗಂಭೀರ ಸ್ಥಿತಿಯಲ್ಲಿ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಬೇಡಗಂ ಠಾಣೆ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಆತ್ಮಹತ್ಯೆ ಸಂಭವಿಸುತ್ತಿದೆ. ಸಣ್ಣ ಕಾರಣಕ್ಕೂ ಆತ್ಮಹತ್ಯೆ ಕಂಡುಬರುತ್ತಿದೆ. ಅನಶ್ವರ ಇಲಿ ವಿಷ ಸೇವಿಸಿ ಆತ್ಮಹತ್ಯೆಗೈದಿರುವುದು ನಾಡನ್ನೇ ಕಣ್ಣೀರಕೋಡಿಯಲ್ಲಿ ಮುಳುಗಿಸಿದೆ. ಈ ಹಿನ್ನೆಲೆಯಲ್ಲಿ ಬೇಡಡ್ಕ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಪ್ರಕಟಿಸಿದ ಶಬ್ದ ಸಂದೇಶ ವೈರಲ್ ಆಗಿತ್ತು. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲವೆಂದು ತಿಳುವಳಿಕೆ ಮೂಡಿಸಿದರೆ ಯಾವುದೇ ವ್ಯಕ್ತಿಯು ಆತ್ಮಹತ್ಯೆಯಿಂದ ಹಿಂದೆ ಸರಿಯಲು ಸಾಧ್ಯತೆ ಇದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸ್ಪಷ್ಟಪಡಿಸಿ ದ್ದರು. ಯಾವುದೇ ಸಮಸ್ಯೆ ಇದ್ದರೂ ಯಾವುದೇ ಸಮಯದಲ್ಲೂ ಪೊಲೀಸರ ಸಹಾಯ ಪಡೆಯಬಹುದೆಂದು ಅವರು ಸ್ಪಷ್ಟಪಡಿಸಿದ್ದರು. ಈ ಸಂದೇಶವನ್ನು ಊರಿನೆಲ್ಲೆಡೆ ಪ್ರಚಾರ ಮಾಡಲಾಗಿತ್ತು.






