ಕುಂಬಳೆ: ಪಕ್ಷದಲ್ಲಿದ್ದುಕೊಂಡು ಪಕ್ಷಕ್ಕೆ ಮೋಸ ಮಾಡಿದ ಆರೋಪ ದಂತೆ ಕುಂಬಳೆ ಪಂಚಾಯತ್ನ ಪ್ರಮುಖ ಲೀಗ್ ಕಾರ್ಯಕರ್ತರನ್ನು ರಾಜ್ಯ ನಾಯಕತ್ವ ಪಕ್ಷದಿಂದ ಹೊರ ಹಾಕಿದೆ. ಯೂತ್ಲೀಗ್ ಮಾಜಿ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ಕೆ.ಎಂ. ಅಬ್ಬಾಸ್, ೧೦ನೇ ವಾರ್ಡ್ನಲ್ಲಿ ಕಾಂಗ್ರೆಸ್ನ ವಿರುದ್ಧ ಸ್ಪರ್ಧಿಸುವ ಸಬೂರ, ಈ ವಾರ್ಡ್ನ ಲೀಗ್ ಶಾಖಾ ಅಧ್ಯಕ್ಷ ಐ.ಸಿ. ಮುಹಮ್ಮದ್, ಶಾಖಾ ಕಾರ್ಯದರ್ಶಿ ಲತೀಫ್ ಎಂಬಿವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಲಾಗಿದೆ. ಕುಂಬಳೆ ಪಂಚಾಯತ್ನಲ್ಲಿ ಪೋರ್ಟ್ನ ಅನುಮತಿಯೊಂದಿಗೆ ಪಂಚಾಯತ್ ನೇರವಾಗಿ ನಡೆಸಿದ ಕಡವಿನ ಸೂಪರ್ವೈಸರ್ ಆಗಿ ಈಗ ಪಕ್ಷದಿಂದ ಹೊರ ಹಾಕಲ್ಪಟ್ಟ ಕೆ.ಎಂ. ಅಬ್ಬಾಸ್ ಕೆಲಸ ನಿರ್ವಹಿಸುತ್ತಿದ್ದರು. ಈ ಕಡವಿನ ಹೊಯ್ಗೆ ಕೊಳ್ಳೆ ಹೊಡೆಯಲಾಗಿದೆ ಹಾಗೂ ಕೆಲಸದಲ್ಲಿ ವಂಚನೆ ಇದೆ ಎಂದು ಲೀಗ್ನಲ್ಲೇ ಆರೋಪ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಸಮಿತಿ ಸಭೆ ಸೇರಿ ಕಡವಿನ ಸೂಪರ್ವೈಸರ್ ಸ್ಥಾನ ದಿಂದ ಯೂತ್ ಲೀಗ್ ನೇತಾರರಾಗಿದ್ದ ಅಬ್ಬಾಸ್ರನ್ನು ಹೊರ ಹಾಕಲಾಗಿತ್ತು. ಕಡವು ಸೂಪರ್ವೈಸರ್ ಎಂಬ ನೆಲೆಯಲ್ಲಿ ಕೆಲಸ ನಿರ್ವಹಿಸದೆ ಪಡೆದು ಕೊಂಡ ಹಣವನ್ನು ಮರಳಿ ವಸೂಲು ಮಾಡಲು ಪಂಚಾಯತ್ ಆಡಳಿತ ಸಮಿತಿ ತೀರ್ಮಾನಿಸಿತ್ತು. ಈ ಹಿನ್ನೆಲೆ ಯಲ್ಲಿ ಕಡವಿನಿಂದ ಹೊಯ್ಗೆ ಸಾಗಾಟ ಹಾಗೂ ಅದಕ್ಕೆ ಮಧ್ಯವರ್ತಿಗಳಾಗಿ ಪಂಚಾಯತ್ನ ಲೀಗ್ ನೇತಾರರು ಪಡೆದುಕೊಂಡ ಹಣದ ಲೆಕ್ಕಾಚಾರವನ್ನು ಅಬ್ಬಾಸ್ ಲೀಗ್ನ ಮೇಲಿನ ಘಟಕಗಳಿಗೆ ಹಾಗೂ ರಾಜ್ಯ ಸಮಿತಿಗೆ ಕಳುಹಿಸಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ದೂರಿನ ಕುರಿತು ತನಿಖೆ ನಡೆಸಲು ಪಕ್ಷ ಮೂವರು ಸದಸ್ಯರ ಲೀಗ್ ನೇತಾರರ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ ನೀಡಿದ ವರದಿಯ ಆಧಾರದಲ್ಲಿ ದೂರುದಾತನಾದ ಅಬ್ಬಾಸ್ ಸಹಿತ ಕುಂಬಳೆಯ ಲೀಗ್ನಪ್ರಮುಖ ನೇತಾರರಾದ ಕೆಲವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ರಾಜ್ಯ ಸಮಿತಿ ಜಿಲ್ಲಾ ಸಮಿತಿಗೆ ತಿಳಿಸಿತ್ತು. ಆದರೆ ರಾಜ್ಯ ಸಮಿತಿಯ ನಿರ್ದೇಶವನ್ನು ಜಿಲ್ಲಾ ಸಮಿತಿ ಪಾಲಿಸಲಿಲ್ಲ. ಬಳಿಕ ಬಂದ ಯೂತ್ಲೀಗ್ ಪದಾಧಿಕಾರಿ ಚುನಾವಣೆಯಲ್ಲಿ ಅಬ್ಬಾಸ್ರನ್ನು ಪಂಚಾಯತ್ ಯೂತ್ ಲೀಗ್ ಅಧ್ಯಕ್ಷ ಸ್ಥಾನದಿಂದ ಹೊರ ಹಾಕಲಾಯಿತು. ಇದಕ್ಕೆ ಪ್ರತಿಕಾರವಾಗಿ ಪಂಚಾಯತ್ ಚುನಾವಣೆಯಲ್ಲಿ ಮಾಟೆಂಗುಳಿಯ ಸಿಪಿಎಂ ಅಭ್ಯರ್ಥಿಗೆ ಹಾಗೂ ೧೮ನೇ ವಾರ್ಡ್ನ ಲೀಗ್ ಬಂಡುಕೋರ ಅಭ್ಯರ್ಥಿ ಸಮೀರರ ಪರವಾಗಿ ಅಬ್ಬಾಸ್ ಬಹಿರಂಗವಾಗಿ ಪ್ರಚಾರ ಕಣಕ್ಕಿಳಿದುದಾಗಿ ಹೇಳಲಾಗುತ್ತಿದೆ. ಇದು ಅಬ್ಬಾಸ್ರನ್ನು ಪಕ್ಷದಿಂದ ಹೊರ ಹಾಕುವ ಸ್ಥಿತಿಗೆ ತಲುಪಿಸಿದೆ. ಪಕ್ಷದಿಂದ ಹೊರ ಹಾಕುವ ಕ್ರಮ ಕೈಗೊಳ್ಳುವುದರೊಂದಿಗೆ ಹೊಯ್ಗೆ ಸಾಗಾಟ ವ್ಯವಹಾರದಲ್ಲಿ ಲೀಗ್ ನೇತಾರರ ಪಾಲುದಾರಿಕೆಯನ್ನು ಚುನಾವಣಾ ಪ್ರಚಾರ ವಿಷಯವಾಗಿಸಿ ಕೊಂಡಿರುವುದಾಗಿ ಮತದಾರರು ಹೇಳುತ್ತಿದ್ದಾರೆ. ಇವರೊಂದಿಗೆ ಮಂಗಲ್ಪಾಡಿ ಪಂಚಾಯತ್ನ ಲೀಗ್ ನೇತಾರ ಅನ್ವರ್ ಮಾಳಿಗ ಅವರನ್ನೂ ಮುಸ್ಲಿಂ ಲೀಗ್ನ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಲಾಗಿದೆ.







