ಪಾಕಿಸ್ತಾನ ಪೌರತ್ವ ಮರೆಮಾಚಿ ಭಾರತೀಯ ಪಾಸ್‌ಪೋರ್ಟ್ ಸಂಪಾದಿಸಿದ ಯುವತಿ ಸೆರೆ

ಕಾಸರಗೋಡು: ಪಾಕಿಸ್ತಾನದ ಪೌರತ್ವವನ್ನು ಮರೆಮಾಚಿ ಭಾರತೀಯ ಪಾಸ್‌ಪೋರ್ಟ್ ಪಡೆದ ಯುವತಿ ವಿರುದ್ಧ ಕಣ್ಣೂರು ಮೈಯಿಲ್ ಪೊಲೀಸರು ಪಾಸ್‌ಪೋರ್ಟ್ ಆಕ್ಟ್  ೨೨, ಇಂಟರ್ ನ್ಯಾಶನಲ್ ಫಾರಿನರ್ಸ್ ಆಕ್ಟ್ 2025 ಸೇರಿದಂತೆ ೭ರಷ್ಟು ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಣ್ಣೂರು ಕನ್ನಾಡಿಪರಂಬು ಕೊಟ್ಟಿಚ್ಚಾಲಿಲ್ ನಿವಾಸಿ ಎಂ.ಕೆ. ಅಲೀನಾ (24) ಎಂಬಾಕೆಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.  ಕನ್ನಾಡಿಪರಂಬು ನಿವಾಸಿ ಅಬ್ದುಲ್ ಹಕೀಂ ಎಂಬವರು 1946ರಂದು ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗಿ  ಖಾಯಂ ಆಗಿ ಜೀವಿಸತೊಡಗಿದ್ದರು. ನಂತರ ಅಲ್ಲಿ ಹಸೀನಾ ಬೀಗಂ ಎಂಬ ಮಹಿಳೆಯನ್ನು ವಿವಾಹವಾಗಿ  ಆ ದಂಪತಿಗೆ ಆರು ಮಕ್ಕಳು ಜನಿಸಿದರು ಇದರಲ್ಲಿ ನಾಲ್ಕನೇ ಪುತ್ರಿ ಹಾಗೂ ಪಾಕಿಸ್ತಾನ ಪ್ರಜೆಯಾಗಿರುವ ಖೈರುನ್ನೀಸಾ 2006 ಮೇ 13ರಂದು ತಮ್ಮ ಮಕ್ಕಳ ಜತೆ ಭಾರತಕ್ಕೆ ಬಂದಿದ್ದರು. ಅವರ ಮಕ್ಕಳಲ್ಲಿ ಓರ್ವೆಯಾಗಿದ್ದಾಳೆ ಪಾಕಿಸ್ತಾನದ ಪೌರತ್ವ ಹೊಂದಿರುವ ಅಲೀನಾ. ಆ ವಿಷಯವನ್ನು ಮರೆಮಾಚಿ ಆಕೆ ನಕಲಿ ದಾಖಲು ಪತ್ರಗಳನ್ನು ಸೃಷ್ಟಿಸಿ 2025 ಜುಲೈ 7ರಂದು ಭಾರತೀಯ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಳು. ಆಕೆ  ಸಲ್ಲಿಸಿದ್ದ ದಾಖಲೆಪತ್ರಗಳು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸುತ್ತಿರುವಂತೆಯೇ 2026 ಮಾರ್ಚ್ 3ರಂದು ಅಲೀನಾ ಭಾರತೀಯ  ಪಾಸ್‌ಪೋರ್ಟ್ ಪಡೆದುಕೊಂಡಿದ್ದಳು. ಆ ಪಾಸ್‌ಪೋರ್ಟ್‌ನ್ನು ಉಪಯೋಗಿಸಿ ಆಕೆ ತನ್ನ ಪತಿ ದುಡಿಯುತ್ತಿರುವ ದುಬಾಯಿಗೆ ಹೋಗಿದ್ದಳು. ಆಕೆ ಭಾರತೀಯ ಪಾಸಪೋರ್ಟ್ ಸಂಪಾದಿಸಿದ ಬಗ್ಗೆ ಗುಪ್ತಚರ ಪೊಲೀಸರು ನಡೆಸಿದ ತನಿಖೆಯಲ್ಲಿ ನಕಲಿ ದಾಖಲುಪತ್ರ ಸೃಷ್ಟಿಸಿ ಪಾಸ್‌ಪೋರ್ಟ್ ಸಂಪಾದಿಸಿ ಅದನ್ನು ಉಪಯೋಗಿಸಿ ವಿದೇಶಕ್ಕೆ ಹೋಗಿರುವುದು ಸ್ಪಷ್ಟಗೊಂಡಿತ್ತು. ಅದರಂತೆ ಆಕೆಯ ವಿರುದ್ದ ಮೈಯಿಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಈಮಧ್ಯೆ ಅಲೀನಾ ಕಳೆದ ಸೋಮವಾರ    ಕಣ್ಣೂರು ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಪೊಲೀಸರು ಆಕೆಯನ್ನು ಅಲ್ಲಿಂದ ಬಂಧಿಸಿದ್ದಾರೆ.

ಪಾಕಿಸ್ತಾನದ ಪೌರತ್ವವನ್ನು ಮರೆಮಾಚಿ ನಕಲಿ ದಾಖಲುಪತ್ರಗಳನ್ನು ಉಪಯೋಗಿಸಿ ಭಾರತೀಯ ಪಾಸ್‌ಪೋರ್ಟ್ ಸಂಪಾದಿಸಿದ್ದು ಕಾನೂನು ಬಾಹಿರವಾದುದು ಮಾತ್ರವಲ್ಲ ಇದು ಅತ್ಯಂತ ಗಂಭೀರವಾದ ಅಪರಾಧ  ವಾಗಿದೆಯೆಂದು ಪೊಲೀಸರು ತಿಳಿಸಿದ್ದಾರ. ವಿದೇಶ ಪಾಸ್‌ಪೋರ್ಟ್ ನ್ನು ರದ್ದುಪಡಿಸಿದಲ್ಲಿ ಮಾತ್ರವೇ ಭಾರತೀಯ ಪಾಸ್‌ಪೋರ್ಟ್ ಪಡೆಯಲು ಅರ್ಹತೆ ಇದೆಯೆಂದೂ ಅವರು ಹೇಳಿದ್ದಾರೆ.

You cannot copy contents of this page