ಪೆರ್ಲ: ರಬ್ಬರ್ ಟ್ಯಾಪಿಂಗ್‌ಗೆ ಸಂಬಂಧಪಟ್ಟ ತರ್ಕ ಹಾಗೂ ಪೂರ್ವದ್ವೇಷದಿಂದ ಯುವಕನಿಗೆ ಇರಿದು ಹಾಗೂ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆಗೈಯ್ಯಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ಕೊಂಡು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ತೃಶೂರು ಚೇಲಕ್ಕರ ಮುಚ್ಚಿಕ್ಕಲ್ ನಿವಾಸಿ ಎಂ.ಎಂ. ವಿಜಯನ್ (44) ಇರಿತದಿಂದ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಎಣ್ಮಕಜೆ ಬೇಂಗಪದವು ಪೂವನಡ್ಕದಲ್ಲಿ ವಾಸಿಸುವ ಅಜಿ ಕುಮಾರ್ (43) ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 7 ಗಂಟೆಗೆ ಘಟನೆ ನಡೆದಿದೆ. ರಬ್ಬರ್ ಟ್ಯಾಪಿಂಗ್‌ಗೆ ಸಂಬಂಧಪಟ್ಟು ಉಂಟಾದ ತರ್ಕದಿಂದ ವಿಜಯನ್‌ಗೆ ಆರೋಪಿಯಾದ ಅಜಿ ಕುಮಾರ್ ಚಾಕುವಿನಿಂದ ಇರಿದು, ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಕೈಗೆ ಇರಿದ ಬಳಿಕ ಕುತ್ತಿಗೆಗೆ ಇರಿಯಲು ಯತ್ನಿಸಿದಾಗ ಅದರಿಂದ ತಪ್ಪಿಸಿಕೊಂಡಿದ್ದು, ಇಲ್ಲದಿದ್ದಲ್ಲಿ ಸಾವು ಸಂಭವಿಸಬಹುದಾಗಿತ್ತೆಂದು ಪ್ರಕರಣದಲ್ಲಿ ತಿಳಿಸಲಾಗಿದೆ.






