ಬಿದ್ದು ಸಿಕ್ಕಿದ ಪರ್ಸ್ ವಾರಸುದಾರರಿಗೆ ಹಸ್ತಾಂತರಿಸಿ  ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಕುಂಬಳೆ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣ ಹಾಗೂ ದಾಖಲೆಪತ್ರಗಳಿದ್ದ ಪರ್ಸನ್ನು ಆಟೋ ರಿಕ್ಷಾ ಚಾಲಕ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪೆರ್ಮುದೆಯ ಆಟೋ ಚಾಲಕ ಮನು ಎಂಬವರು ನಿನ್ನೆ ಸಂಜೆ ೪ ಗಂಟೆಗೆ ಉಪ್ಪಳ ಭಾಗಕ್ಕೆ ತೆರಳುತ್ತಿದ್ದಾಗ ಬೇಕೂರಿನ ರಸ್ತೆಯಲ್ಲಿ  ಪರ್ಸ್ ಬಿದ್ದಿತ್ತು. ಅದನ್ನು ಹೆಕ್ಕಿ ಪರಿಶೀಲಿಸಿ ದಾಗ ೧೦ ಸಾವಿರ ರೂಪಾಯಿ, ಎಟಿಎಂ ಕಾರ್ಡ್, ಲೈಸನ್ಸ್ ಮೊದಲಾದವುಗಳಿದ್ದವು. ಲೈಸನ್ಸ್‌ನ ವಿಳಾಸದ ಆಧಾರದಲ್ಲಿ ಶೋಧ ನಡೆಸಿದಾಗ ಅದು ಪೈವಳಿಕೆ ಬಾಯಿಕಟ್ಟೆಯ ಮೊಹಮ್ಮದ್ ಹಾರಿಫ್‌ರದ್ದಾಗಿದೆಯೆಂದು ತಿಳಿದು ಬಂತು. ಕೂಡಲೇ ಅವರನ್ನು ಸಂಪರ್ಕಿಸಿ  ಪೆರ್ಮುದೆ ಆಟೋ ಸ್ಟ್ಯಾಂಡ್‌ಗೆ ಕರೆಸಿ ಆಟೋ ರಿಕ್ಷಾ ಚಾಲಕರ ಉಪಸ್ಥಿತಿಯಲ್ಲಿ ಪರ್ಸನ್ನು ಮನು ಅವರು ಮೊಹಮ್ಮದ್ ಹಾರಿಫ್‌ರಿಗೆ ಹಸ್ತಾಂತರಿಸಿದರು. ಮನು ತೋರಿಸಿದ ಪ್ರಾಮಾಣಿಕತೆಗೆ ನಾಗರಿಕರು ಅಭಿನಂದಿಸಿದ್ದಾರೆ.

You cannot copy contents of this page