ಹೋಟೆಲ್‌ನಲ್ಲಿ ಆಹಾರ ಸೇವಿಸಿ ಮರಳುವಷ್ಟರಲ್ಲಿ ಬೈಕ್ ನಾಪತ್ತೆ : ಕಳವುಗೈದ ವ್ಯಕ್ತಿಯ ಪತ್ತೆಗಾಗಿ ಶೋಧ

ಕುಂಬಳೆ: ಹೋಟೆಲ್‌ನಲ್ಲಿ ಆಹಾರ ಸೇವಿಸಿ ಮರಳಿದಾಗ ಹೊರಗೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಕುರಿತು ಲಭಿಸಿದ ದೂರಿನಂತೆ  ಕೇಸುದಾಖಲಿಸಿಕೊಂಡ ಕುಂಬಳೆ ಪೊಲೀಸರು ನಡೆಸಿದ ತನಿಖೆಯಲ್ಲಿ ಬೈಕ್ ಕಳವಿಗೀಡಾಗಿರು ವುದಾಗಿ ತಿಳಿದುಬಂದಿದೆ.  ಬೈಕ್ ಕಳವುಗೈದ ವ್ಯಕ್ತಿ ಯಾರೆಂದು ತಿಳಿದುಬಂದಿದ್ದು, ಇದೀಗ ಆತನನ್ನು ಪತ್ತೆಹಚ್ಚಲಿರುವ ಪ್ರಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.ಕುಂಬಳೆ ಕಂಚಿಕಟ್ಟೆ ನಿವಾಸಿ ಅಜಿತ್ ಕುಮಾರ್ ಎಂಬವರ ಪಲ್ಸರ್ ಬೈಕ್  ಕಳವಿಗೀಡಾಗಿದೆ. ಕಳೆದ ಶನಿವಾರ ಮಧ್ಯಾಹ್ನ 1.30ರ ವೇಳೆ ಅಜಿತ್ ಕುಮಾರ್ ಕುಂಬಳೆ ಪೇಟೆಯ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೋಟೆಲೊಂದರ ಬಳಿ ಬೈಕ್ ನಿಲ್ಲಿಸಿ ಆಹಾರ ಸೇವಿಸಲು ತೆರಳಿದ್ದರು. ಆಹಾರ ಸೇವಿಸಿ 1.45ಕ್ಕೆ ಹೋಟೆಲ್‌ನಿಂದ ಹೊರಗೆ ಬಂದಾಗ ಬೈಕ್ ನಾಪತ್ತೆಯಾಗಿತ್ತೆನ್ನಲಾಗಿದೆ. ಈ ಬಗ್ಗೆ ಅಜಿತ್ ಕುಮಾರ್ ನೀಡಿದ ದೂರಿನಂತೆ  ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.   ಕುಂಬಳೆ ರೈಲ್ವೇ ನಿಲ್ದಾಣ ಬಳಿಯ ಕುಟುಂಬ ಕ್ಷೇತ್ರವೊಂದರ ಸಿಸಿಕ್ಯಾಮರಾ ಪರಿಶೀಲಿಸಿದಾಗ ಕಳವುಗೀಡಾದ ಬೈಕ್‌ನ್ನು ಓರ್ವ ಚಲಾಯಿಸುತ್ತಿರುವುದು ಕಂಡುಬಂದಿದೆ.  ಆ ವ್ಯಕ್ತಿಯ ಕುರಿತು ಮಾಹಿತಿ ಲಭಿಸಿದ್ದು, ಆತನ ಪತ್ತೆಗಾಗಿ  ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page