ಪೆಟ್ರೋಲಿಯಂ, ಗ್ಯಾಸ್ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಲು ಬಿಎಂಎಸ್ ಆಗ್ರಹ

ಕಾಸರಗೋಡು: ಭಾರತೀಯ ಮಜ್ದೂರು ಸಂಘದ ಪೋಷಕ ಸಂಘಟನೆಯಾದ ಪೆಟ್ರೋಲಿಯಂ ಆಂಡ್ ಗ್ಯಾಸ್ ಮಜ್ದೂರ್ ಸಂಘ್ ಜಿಲ್ಲಾ ಸಮ್ಮೇಳನದಲ್ಲಿ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಬೇಕೆಂದು ಬೇಡಿಕೆ ಒಡ್ಡಲಾಯಿತು. ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರನ್ ಬಂಗಳೋತ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಪೆಟ್ರೋಲಿಯಂ, ಗ್ಯಾಸ್ ವಲಯದ ಲಾರಿ ಕಾರ್ಮಿಕರಿಗಾಗಿ ಪ್ರಸ್ತುತ ಇರುವ ಒಪ್ಪಂದ ಪ್ರಕಾರದ ವೇತನ ಕಾಸರಗೋಡು ಜಿಲ್ಲೆಯಲ್ಲಿ ಲಭ್ಯಗೊಳಿಸಲಾಗುತ್ತಿಲ್ಲವೆಂದು ಆರೋಪಿಸಿದರು. ಒಪ್ಪಂದ ಪ್ರಕಾರವಿರುವ ವೇತನ ಹಾಗೂ ಇತರ ಸೌಲಭ್ಯಗಳನ್ನು ಕಾರ್ಮಿಕರಿಗೆ ಶೀಘ್ರವೇ ಲಭ್ಯಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಕಂಪೆನಿಗಳು ನೇರವಾಗಿ ನಡೆಸುವ ಪೆಟ್ರೋಲ್ ಬಂಕ್‌ಗಳಲ್ಲಿ ಕೇರಳದ ಹಲವು ಭಾಗಗಳಲ್ಲಿ 21,000 ರೂ.ಗಿಂತಲೂ ಹೆಚ್ಚು ವೇತನ ನೀಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಏಜೆನ್ಸಿಗಳು ಏಕರೂಪದ ವೇತನ ಜ್ಯಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು. ಮಹಿಳಾ, ಪುರುಷ ವ್ಯತ್ಯಾಸವಿಲ್ಲದೆ ಎಲ್ಲಾ ಕಾರ್ಮಿಕರಿಗೂ ಇದನ್ನು ಅನ್ವಯಗೊಳಿಸಬೇಕೆಂದು ಅವರು ನುಡಿದರು. ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ರತೀಶ್ ಕೂಡ್ಲು ಅಧ್ಯಕ್ಷತೆ ವಹಿಸಿದರು. ಬಾಬು ಕೆ.ವಿ. ಶುಭ ಕೋರಿದರು. ಚಟುವಟಿಕಾ ವರದಿ, ಆಯವ್ಯಯ ಲೆಕ್ಕ ಮಂಡಿಸಲಾಯಿತು. ದಿನೇಶ್ ಪಿ. ಬಂಬ್ರಾಣ ಸಮಾರೋಪ ಭಾಷಣ, ನೂತನ ಪದಾಧಿಕಾರಿಗಳ ಘೋಷಣೆ ನಡೆಸಿದರು. ಅಧ್ಯಕ್ಷರಾಗಿ ಕೆ.ವಿ. ಬಾಬು, ಉಪಾಧ್ಯಕ್ಷರಾಗಿ ಬಿಜು ಎಚ್.ಪಿ. ಮಂಗಳೂರು, ಶ್ರೀಜಿತ್ ಎಂಆರ್‌ಪಿಎಲ್, ಟಿ. ಸುಕುಮಾರ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಚೇನಕ್ಕೋಡು, ಜೊತೆ ಕಾರ್ಯದರ್ಶಿಯಾಗಿ ರಂಜಿತ್ ಮಾವುಂಗಲ್, ಕೋಶಾಧಿಕಾರಿಯಾಗಿ ಜಯೇಶ್ ಪಾರೆಕಟ್ಟೆ ಆಯ್ಕೆಯಾದರು. ಶ್ರೀಧರ ಚೇನಕ್ಕೋಡು ಸ್ವಾಗತಿಸಿ, ಜಯೇಶ್ ವಂದಿಸಿದರು.

You cannot copy contents of this page