ತಂದೆಯ ಜೊತೆ ಹೊಳೆ ಬಳಿ ಹೋದ ಬಾಲಕ ನೀರಲ್ಲಿ ಮುಳುಗಿ ದಾರುಣ ಸಾವು

ಕಾಸರಗೋಡು: ತಂದೆ ಮತ್ತು ಸಹೋದರಿಯ ಜತೆಗೆ ಹೊಳೆ ಬಳಿಗೆ ಬಂದ ಬಾಲಕ ನೀರಲ್ಲಿ ಮುಳುಗಿ ಸಾವನ್ನ ಪ್ಪಿದ ದಾರುಣ ಘಟನೆ ಮುಟ್ಟತ್ತೋಡಿ ಬಳಿ ನಡೆದಿದೆ. ಮುಟ್ಟತ್ತೋಡಿ ಕಲ್ಲಕಟ್ಟ ಕೋಪ ಕಡಂಬ್ಬಟ್ಟಿ ಹೌಸ್‌ನ ಕೆ. ಅಬ್ದುಲ್ ರಹ್ಮಾನ್- ಆಯಿಷತ್ ಶಿಬೀನಾ ದಂಪತಿ ಪುತ್ರ, ಮಾನ್ಯ ಗ್ಲೋಬಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಎರಡನೇ ತರಗತಿ ವಿದ್ಯಾರ್ಥಿ ಕೆ.ಎ. ಅಬ್ದುಲ್ಲ (8) ಸಾವನ್ನಪ್ಪಿದ ದುರ್ದೈವಿ ಬಾಲಕ.

ಗಲ್ಫ್ ಉದ್ಯೋಗಿಯಾಗಿರುವ ತಂದೆ ಅಬ್ದುಲ್ ರಹ್ಮಾನ್ ಮತ್ತು ಏಕ ಸಹೋದರಿ ಖದೀಜತ್ ಶೈಮಾ ಹಾಗೂ ತಂದೆಯ ಸಹೋದರಿಯ ಪುತ್ರಿ ಜತೆ ಅಬ್ದುಲ್ಲ  ನಿನ್ನೆ ಬೆಳಿಗ್ಗೆ 11 ಗಂಟೆಗೆ ಕೋಪಾ ಸೇತುವೆಯ ಮಧುವಾಹಿನಿ ಹೊಳೆ ಬಳಿ ಬಂದಿದ್ದನು. ದಡದಲ್ಲಿ ನಿಂತಿದ್ದ ಪುತ್ರ ಅಬ್ದುಲ್ಲ ನಾಪತ್ತೆಯಾಗಿದ್ದು, ಅದನ್ನು ಗಮನಿಸಿದ ಅವರು ತಕ್ಷಣ ಹೊಳೆಗಿಳಿದು ಹುಡುಕಾಡಿದಾಗ ಅಬ್ದುಲ್ಲ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು  ಆತನನ್ನು ತಕ್ಷಣ ಮೇಲಕ್ಕೆತ್ತಿ ಮೊದಲು ಕಾಸರಗೋಡಿನ ಆಸ್ಪತ್ರೆಗೂ, ನಂತರ ಚೆಂಗಳದ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದರೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ಗಲ್ಫ್ ಉದ್ಯೋಗಿಯಾಗಿರುವ ಬಾಲಕನ ತಂದೆ ಅಬ್ದುಲ್ ರಹ್ಮಾನ್ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಬಾಲಕನ ಅನಿರೀಕ್ಷಿತ ಅಗಲುವಿಕೆ ಇಡೀ ಊರನ್ನೇ ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ನಂತರ ಮನೆಯವರಿಗೆ ಬಿಟ್ಟು ಕೊಡಲಾಯಿತು.

RELATED NEWS

You cannot copy contents of this page