ಕಾಸರಗೋಡು: ಭಜಕರಲ್ಲಿ ಬಲಗೊಂಡಿರುವ ಭಕ್ತಿಯ ಸಂಕೇತವೇ ಅಲ್ಲಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಗಳಾಗಿವೆ. ದೇವರಿಗೆ ಸಲ್ಲಿಸಲ್ಪಡುವ ಬ್ರಹ್ಮಕಲಶ ಮೂಲಾರ್ಥದಲ್ಲಿ ನಮ್ಮೊಳಗಿನ ಕ್ಲೇಶಗಳು ಮಾಯವಾಗಿ ಹೊಸ ಚೈತನ್ಯಕ್ಕೆ ತೆರೆದುಕೊಳ್ಳಲು ಪ್ರೇರೇಪಿಸುವ ಕಲಶವಾಗಿದೆ. ನಮ್ಮ ಒಳಗಿನ ಅಹಂ ಎಂಬ ಭಾವ ಇಲ್ಲವಾಗಿ ನವ ಪ್ರತಿಷ್ಠೆ ಆಗಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಅಯ್ಯಪ್ಪ ಸ್ವಾಮಿ ಎಲ್ಲ ದುರಿತಗಳನ್ನೂ ನಿವಾರಿಸುವ, ಧರ್ಮ ಘ್ಲಾನಿಗೊಳಗಾದಾಗ ಸಂಕಟ ತೀರಿಸಲು ಆವಿರ್ಭವಿಸಿದ ಮಹಾನ್ ಶಕ್ತಿ. ಸನ್ಮಸ್ಸು, ಸದ್ಬುದ್ಧಿ ಎಲ್ಲರ ಪಾಲಿಗೆ ಈ ಮೂಲಕ ಪ್ರಾಪ್ತಿಯಾಗಲಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿದ್ದು ಮಾತನಾಡಿ, ಭಗವಂತನ ಕೃಪಾಕಟಾಕ್ಷವಿದ್ದರೂ ಅದನ್ನು ಕ್ರಿಯಾ ರೂಪದಲ್ಲಿ ಸಾಕಾರ ಗೊಳಿಸುವ ಸನ್ಮನಸ್ಸು ಭಕ್ತರಿಗೊದಗಿರು ವುದರಿಂದ ಇಂತಹ ವೈದಿಕ, ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿವೆ. ಪ್ರಕೃತಿಯಲ್ಲಿ ಎಲ್ಲವೂ ಅನ್ಯೋನ್ಯವಾಗಿ, ಸೌಹಾರ್ದತೆಯಿಂದ ಬದುಕುವುದೇ ಸಹಜ ಪ್ರವೃತ್ತಿಯಾಗಿರುತ್ತದೆ. ಸನಾತನ ಧರ್ಮವೂ ಇದನ್ನೇ ಪ್ರತಿಪಾದಿಸಿದೆ. ಇಂದು ಜಗತ್ತಿನ ಹಲವೆಡೆ ಯುದ್ಧದ ಭೀತಿ, ಸಂಕಷ್ಟದ ಜನತೆಗಳನ್ನು ಕಾಣುತ್ತಿ ದ್ದೇವೆ. ಕೆಲವರ ಸ್ವಾರ್ಥ ಲಾಲಸೆ ಗಳಿಂದ ಇಂತಹ ಗೊಂದಲಗಳು ಹುಟ್ಟಿಕೊಂಡಿದೆ. ಇದರ ಬದಲಿಗೆ ಹೃದಯ ವಿಶಾಲತೆಯೊಂದಿಗೆ ಹೊಂ ದಾಣಿಕೆಯ ಬದುಕು ಸಾಗಿಸಿದಾಗ ಬದುಕು ಸುಂದರವಾಗಿ ಕ್ಲೇಶ ರಹಿತವಾಗುತ್ತದೆ. ಇದರಿಂದ ಪಾರಾಗಲು ಆಧ್ಯಾತ್ಮತ, ಧರ್ಮದ ಹಾದಿ ಸೂಕ್ತವಾದುದು ಎಂದವರು ಈ ಸಂದರ್ಭ ಕರೆ ನೀಡಿದರು.
ಧಾರ್ಮಿಕ ಮುಂದಾಳು ಬಿ. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉದ್ಯಮಿ ಪಿ.ಬಿ. ಅಚ್ಚು ನಾಯಮ್ಮಾರ್‌ಮೂಲೆ, ಪಿ. ಬಿ. ತೌಸೀಫ್ ನಾಯಮ್ಮಾರ್ ಮೂಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಉದ್ಯಮಿ ಮಂಜುನಾಥ ಕಾಮತ್ ಕಾಸರಗೋಡು, ಬಾಲಕೃಷ್ಣ ಚೆನ್ನಿಕೆರೆ, ಕಿಶೋರ್ ಕುಮಾರ್, ಹರೀಶ್ ಕೋಟೆಕಣಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುನಿಲ್ ಕೆ.ಆರ್. ಚೆನ್ನಿಕೆರೆ ಸ್ವಾಗತಿಸಿ, ಪ್ರಧಾನ ಕಾರ್ಯ ದರ್ಶಿ ಕೃಷ್ಣಪ್ರಸಾದ್ ಕೋಟೆಕಣಿ ವಂದಿಸಿದರು.ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಷ್ಟಬಂಧ ಲೇಪನ, ಬ್ರಹ್ಮಕಲಶಾಬಿ ಷೇಕ ವಿವಿಧ ವೈದಿಕ ವಿಧಿವಿಧಾನ ಗಳೊಂದಿಗೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತ ನಾಟ್ಯ, ಶ್ರೀ ರಾಮನಾಥ ಸಾಂಸ್ಕೃತಿಕ ಯಕ್ಷಗಾನ ತರಬೇತಿ ಕೇಂದ್ರ, ರಾಮನಗರ ಕೋಟೆಕಣಿ ಇವರಿಂದ ಭಸ್ಮಾಸುರ ಮೋಹಿನಿ, ಶಬರಿಮಲೆ ಶ್ರೀ ಸ್ವಾಮಿಅಯ್ಯಪ್ಪ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ನಡೆಯಿತು. ಸಂಜೆ ೬ಕ್ಕೆ ದೀಪಾರಾಧನೆ, ತಾಯಂಬಕ, ರಾತ್ರಿ 7ಕ್ಕೆ ಶ್ರೀ ದೇವರ ಉತ್ಸವ ನಡೆಯಲಿದೆ.






