ಕುಂಬಳೆ: ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನ ಅಂಗವಾಗಿ ನಾಳೆ ಅಪರಾಹ್ನ ೩.೩೦ಕ್ಕೆ ಆರಿಕ್ಕಾಡಿ ನದಿ ತೀರದಲ್ಲಿ ದೋಣಿ ವಿಹಾರ (ಕಯಾಕಿಂಗ್) ಕಾರ್ಯಕ್ರಮ ಆಯೋಜಿಸಲಾಗಿದೆಯೆಂದು ಸಂಘಟಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ, ಮುನ್ನೆಚ್ಚರಿಕೆಯಂಗವಾಗಿ ಫೋಗ್ಸಿ ಸಂಸ್ಥೆಯ ಸ್ತನ ಆರೋಗ್ಯ ಸಮಿತಿ ನೇತೃತ್ವದಲ್ಲಿ ‘ಸ್ತನ ಆರೋಗ್ಯಕ್ಕಾಗಿ ಹುಟ್ಟು ಹಾಕೋಣ’ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ತನ ಕ್ಯಾನ್ಸರ್ನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವುದರ ಮಹತ್ವವನ್ನು ಸಾರ್ವಜನಿ ಕರಿಗೆ ತಿಳಿಸುವುದು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು, ಆರೋಗ್ಯಕರ ಜೀವನ ಶೈಲಿಯನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಕುಂಬಳೆ ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸುವರು. ಡಾ| ಉಷಾ ಮುಖ್ಯ ಅತಿಥಿಯಾಗಿರುವರು. ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು ಭಾಗವಹಿಸಿ ದರು. ಕೆ.ಒ.ಜಿ.ಎಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ವಿಮಾ ಕಾಸರಗೋಡು ಚಾಪ್ಟರ್, ಕುಂಬಳೆ ಪಂಚಾಯತ್, ಕೆ.ಪಿ.ಎಸ್. ಕಯಾಕಿಂಗ್ ಆರಿಕ್ಕಾಡಿ ಎಂಬಿವುಗಳ ಜಂಟಿ ಸಹಕಾರ ದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಉಪಾಧ್ಯಕ್ಷ ಬಲ್ಕೀಸ್, ಡಾ| ಉಷಾ, ಎ.ಕೆ. ಆರೀಫ್, ಕೆ.ಪಿ. ಮುನೀರ್, ಕೆ.ಎಂ. ಅಬ್ಬಾಸ್ ಭಾಗವಹಿಸಿದರು.






