ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಚುನಾವಣೆ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಇದರಂತೆ ಯುಡಿಎಫ್ ಉಮೇದ್ವಾರ ಕಲ್ಲಟ್ರ ಮಾಹಿನ್ ಕಾರಡ್ಕ ಮತ್ತು ಬದಿಯಡ್ಕ ಪಂಚಾಯತ್‌ಗಳಲ್ಲಿ ನಿನ್ನೆ ಕಾರ್ನರ್ ಸಭೆ ನಡೆಸಿದರು. ಕಾರಡ್ಕ ಪಂಚಾಯತ್‌ನ ಕುಂಟಾರಿನಲ್ಲಿ ನಡೆದ ಕಾರ್ನರ್ ಸಭೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿ ದರು. ಪಂಚಾಯತ್ ಚುನಾವಣಾ ಸಮಿತಿ ಅಧ್ಯಕ್ಷ ಪುರುಷೋತ್ತಮನ್ ಕಾರಡ್ಕ ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯದಲ್ಲಿ ಬಳಿಕ ನಡೆದ ಯುಡಿಎಫ್ ಚುನಾವಣಾ ಪ್ರಚಾರ ಸಭೆಯನ್ನು ಮುಸ್ಲಿಂ ಲೀಗ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ ಸಲಾಂ ಉದ್ಘಾಟಿಸಿದರು. ರಾಜ್ಯ ಕೋಶಾಧಿಕಾರಿ ಸಿ.ಟಿ. ಅಹಮ್ಮದಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್ಮಾನ್, ಪಿ.ಎಂ. ಮುನೀರ್ ಹಾಜಿ, ಗೋವಿಂದನ್ ನಾಯರ್, ಮಾಹಿನ್ ಕೇಳೋಟ್, ಶಜೀರ್ ಇಕ್ಬಾಲ್ ಮೊದಲಾದವರು ಮಾತನಾಡಿದರು.
ಬಾರಡ್ಕದಲ್ಲಿ ನಡೆದ ಯುಡಿಎಫ್ ಚುನಾವಣಾ ಪ್ರಚಾರ ಸಭೆಯನ್ನು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಉದ್ಘಾಟಿಸಿದರು. ಯುಡಿಎಫ್‌ನ ಪಂಚಾಯತ್ ಚುನಾವಣಾ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು.
ಎನ್‌ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿ ನಿನ್ನೆ ಮುಳ್ಳೇರಿಯ ಮತ್ತು ಕಾಸರಗೋಡು ಕಡಪ್ಪುರದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿಯವರು ಭಾಗವಹಿಸಿದ ಎನ್‌ಡಿಎ ಸಭೆಗಳಲ್ಲಿ ಭಾಗವಹಿಸಿದರು. ಮಾತ್ರವಲ್ಲ ಎನ್‌ಡಿಎ ಜಿಲ್ಲಾ ಕಾರ್ಯಾಲಯದಲ್ಲಿ ನಿನ್ನೆ ನಡೆದ ಎನ್‌ಡಿಎ ವಿಕಸಿತ ಕಾಸರಗೋಡು ವಿಷನ್- 2031 ಮಾರ್ಗಸೂಚಿ ಪ್ರಕಾಶನ ಕಾರ್ಯಕ್ರಮದಲ್ಲೂ ಭಾಗವಹಿಸಿದರು. ಈ ಸಮಾವೇಶವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿ ಮಾರ್ಗಸೂಚಿ ಪ್ರಕಾಶನವನ್ನು ನೆರವೇರಿಸಿದರು.

ಕಳೆದ ನಲ್ವತ್ತು ವರ್ಷಗಳಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಮುಸ್ಲಿಂ ಲೀಗ್ ಪ್ರತಿನಿಧಿಕರಿಸಿದೆ. ಈ ಕ್ಷೇತ್ರದ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಆದ್ದರಿಂದ ಈ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಉಮೇದ್ವಾರ ರನ್ನು ಗೆಲ್ಲಿಸಬೇಕೆಂದು ಶಾಸಕ ಪೂಂಜಾ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿ ಮಾತನಾಡಿದರು. ಎಡರಂಗ ಪಕ್ಷೇತರ ಅಭ್ಯರ್ಥಿ ಶಾನವಾಸ್ ಪಾದೂರು ಕೂಡಾ ನಿನ್ನೆ ಕಾಸರಗೋಡು ವಿಧಾನಸಭಾ ಕ್ಷೇತ್ರದ ಹಲವೆಡೆಗಳಲ್ಲಿ ಪರ್ಯಟನೆ ನಡೆಸಿದರು. ವಿದ್ಯಾರ್ಥಿಗಳೂ ಇದರಲ್ಲಿ ಪಾಲ್ಗೊಂಡರು.






