ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಳಿಯ ನಿವಾಸಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ (101) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು. ಕಳೆದ 70 ವರ್ಷಗಳಿಂದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಶ್ರೀ ವಿಶ್ವಕರ್ಮ ಫರ್ನೀಚರ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಇವರು ಬಡಗಿ ವೃತ್ತಿಯಲ್ಲಿ ಜನಾನುರಾಗಿಯಾಗಿದ್ದರು. ಅಲ್ಲದೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಜೀವನದ ಸಾರ್ಥಕ 100 ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಜನ್ಮ ದಿನದ ಶತಮಾನೋತ್ಸವವನ್ನು ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಿದ್ದರು. ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಹಿರಿಯ ಸದಸ್ಯರಾಗಿದ್ದ ಇವರನ್ನು ಬ್ಯಾಂಕ್‌ನ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಿದ್ದರು.
ಮೃತರು ಮಕ್ಕಳಾದ ಹರಿಶ್ಚಂದ್ರ ಆಚಾರ್ಯ, ಪಾಂಡುರಂಗ ಆಚಾರ್ಯ ಪುತ್ತೂರು, ಗೀತಾ, ಲತಾ, ಪ್ರಭಾ, ಚಿತ್ರ, ಜ್ಯೋತಿ, ಅಳಿಯಂದಿರಾದ ದಿನೇಶ್ ಆಚಾರ್ಯ ಕಾಸರಗೋಡು, ಬಾಲಕೃಷ್ಣ ಆಚಾರ್ಯ ಕೋಟೆಕ್ಕಾರು, ರಾಧಾಕೃಷ್ಣ ಆಚಾರ್ಯ ಕೊಯಂಬತ್ತೂರು, ಹೇಮಚಂದ್ರ ಆಚಾರ್ಯ ಕೋಟೆಕ್ಕಾರು, ಸೊಸೆಯಂದಿರಾದ ಕಲಾಶ್ರೀ, ಕಾಂಚನ, ಸಹೋದರ ನೀಲಯ್ಯ ಆಚಾರ್ಯ ಅಂಬಾರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತರ ಪತ್ನಿ ಶಾರದ ಹಾಗೂ ಅಳಿಯ ಸುಬ್ರಹ್ಮಣ್ಯ ಆಚಾರ್ಯ ಮುಳ್ಳೇರಿಯ ಈ ಹಿಂದೆ ನಿಧನರಾಗಿದ್ದಾರೆ. ವೆಂಕಟರಮಣ ಆಚಾರ್ಯರ ಅಂತ್ಯಕ್ರಿಯೆ ಇಂದು ಅಪರಾಹ್ನ ೩ ಗಂಟೆಗೆ ರಾಮತ್ತಮಜಲಿನ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಯಲಿದೆ. ನಿಧನಕ್ಕೆ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ, ಮಹಿಳಾ ಸಂಘ, ಗುರುಸೇವಾ ಪರಿಷತ್, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.






