ಮುಖ್ಯಮಂತ್ರಿ ಯಾರು? ಹಿರಿಯ ನೇತಾರರು ಪಾಲ್ಗೊಂಡ ಚರ್ಚೆ ದಿಲ್ಲಿಯಲ್ಲಿ ಆರಂಭ

ನವದೆಹಲಿ: ಕೇರಳದ ನೂತನ ಮುಖ್ಯಮಂತ್ರಿ ಯಾರು ಎಂಬುದನ್ನು ತೀರ್ಮಾನಿಸಲು ಕಾಂಗ್ರೆಸ್ ಹೈಕಮಾಂಡ್ ಕರೆದ ವಿಸ್ತೃತ ಚರ್ಚೆ ದಿಲ್ಲಿಯಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಕಾಂಗ್ರೆಸ್‌ನ ಕೇರಳ ಘಟಕದ ಮಾಜಿ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧ್ಯಕ್ಷರನ್ನು ಮಾತ್ರವೇ ಇಂದಿನ ಈ ಚರ್ಚೆಗೆ ಆಹ್ವಾನಿಸಲಾಗಿದೆ.

ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮುಖ್ಯಮಂತ್ರಿ ಯಾರು ಎಂಬ ಅಂತಿಮ ತೀರ್ಮಾನಕ್ಕೆ ಹೈಕಮಾಂಡ್ ಬಂದ ಬಳಿಕ ವಿದ್ಯುಕ್ತವಾಗಿ ಘೋಷಿಸಲಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಲ್ತುದಿಯಲ್ಲಿ ನಿಂತಿರುವ ಕಾಂಗ್ರೆಸ್ ನೇತಾರರಾದ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್‌ರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ದಿನಗಳ ಹಿಂದೆಯೇ ಚರ್ಚೆ ನಡೆಸಿತ್ತಾದರೂ, ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿರುವ ಬೇಡಿಕೆಯಿಂದ ನಾವು ಹಿಂದಕ್ಕೆ ಸರಿಯುವುದಿಲ್ಲವೆಂಬ ಅಚಲ ನಿಲುವಿನಲ್ಲಿ ಈ ಮೂವರು ಈಗಲೂ ಮುಂದುವರಿದಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ  ಈ ಮೂವರು ನೇತಾರರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿದರೂ ಅದೂ ಫಲಕಾರಿಯಾಗಲಿಲ್ಲ. ಇದರಿಂದಾಗಿ ಕಾಂಗ್ರೆಸ್‌ನ ಕೇರಳ ಘಟಕದ ಮಾಜಿ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧ್ಯಕ್ಷರನ್ನು ಹೈಕಮಾಂಡ್ ಇಂದು ದಿಲ್ಲಿಗೆ ಕರೆಸಿ ಈ ವಿಷಯದಲ್ಲಿ ಅವರ ಅಭಿಪ್ರಾಯವನ್ನು ಸಂಗ್ರಹಿಸತೊಡಗಿದೆ. ಹೊಸ ಮುಖ್ಯಮಂತ್ರಿ ಯಾರು ಎಂಬ ಘೋಷಣೆ ಎಂದು ಉಂಟಾಗಬಹುದು ಎಂಬುದನ್ನು ಸದ್ಯ ಊಹಿಸಲೂ ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

ಮುಖ್ಯಮಂತ್ರಿ ಆಯ್ಕೆ ಇನ್ನೂ ನಡೆಯದೇ ಇರುವುದಕ್ಕೆ ಯುಡಿಎಫ್‌ನ ಘಟಕ ಪಕ್ಷವಾಗಿರುವ ಮುಸ್ಲಿಂ ಲೀಗ್ ತನ್ನ ತೀವ್ರ ಆಕ್ರೋಶವನ್ನು ಈಗ ಬಹಿರಂಗವಾಗಿಯೇ ವ್ಯಕ್ತಪಡಿಸಿದೆ. ಯುಡಿಎಫ್‌ನ್ನು ಕೇರಳ ಜನತೆ ಪ್ರಚಂಡ ಬಹುಮತದಿಂದ ಆರಿಸಲ್ಪಟ್ಟಿದ್ದರೂ ಮುಖ್ಯಮಂತ್ರಿ ಆಯ್ಕೆ ಇನ್ನೂ ನಡೆಯದೇ ಇರುವುದು ಕೇರಳ ಜನತೆಯನ್ನು ತೀವ್ರ ಸಂಕಷ್ಟಕ್ಕೊಳ ಪಡಿಸಿದೆ ಎಂದು ಮುಸ್ಲಿಂ ಲೀಗ್ ಹೇಳಿದೆ.

You cannot copy contents of this page