ಕಾಸರಗೋಡು: ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಸೋಲೆಂಬುದನ್ನು ಕಾಣದ ಐಕ್ಯರಂಗದ ಹಾಗೂ ಮುಸ್ಲಿಂ ಲೀಗ್‌ನ ವಿಧಾನಸಭಾ ಮಂಡಲಗಳಲ್ಲಿ ಒಂದಾಗಿದೆ ಕಾಸರಗೋಡು. ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಈ ಮಂಡಲದಲ್ಲಿ ಐಕ್ಯರಂಗ ಗಳಿಸಿದ ಮುನ್ನಡೆ, ಮಂಡಲದಲ್ಲಿ ಇಂದಿನವರೆಗೆ ಸೋಲು ಕಂಡುಬರದಿರುವುದು ಲೀಗ್‌ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ. ಟಿ.ಎ. ಇಬ್ರಾಹಿಂ, ಸಿ.ಟಿ. ಅಹಮದಾಲಿ ಜಯಗಳಿಸಿದ ಕಾಸರಗೋಡು ಮಂಡಲದಲ್ಲಿ ೧೫ ವರ್ಷದಿಂದ ಶಾಸಕ ಎನ್.ಎ. ನೆಲ್ಲಿಕುನ್ನು ಮುಂದುವರಿ ಯುತ್ತಿದ್ದಾರೆ. ಐಎನ್‌ಎಲ್‌ನ ಮುಖಂಡನಾಗಿದ್ದ ನೆಲ್ಲಿಕುನ್ನು ಕಾಸರಗೋಡು ಮಂಡಲದಿಂದ ಸ್ಪರ್ಧಿಸಿದ್ದರು. ಆ ಬಳಿಕ ಐಎನ್‌ಎಲ್ ನಿಂದ ಮಾತೃಸಂಘಟನೆಯಾದ ಮುಸ್ಲಿಂ ಲೀಗ್‌ಗೆ ವಾಪಸಾದ ಇವರ ರಾಷ್ಟ್ರೀಯ ಗತಿ ಬದಲಾಯಿತು. ಸಿ.ಟಿ. ಅಹಮದಾಲಿಯವರ ಬಳಿಕ ಸ್ಪರ್ಧೆಗಿಳಿದ ಎನ್.ಎ. ನೆಲ್ಲಿಕುನ್ನುಗೆ ಪ್ರಚಂಡ ಜಯವನ್ನು ಕಾಸರಗೋಡು ಮಂಡಲ ನೀಡಿದೆ.
ಎರಡನೇ ಬಾರಿಯ ಚುನಾವಣೆ ಯಲ್ಲೂ ಇವರು ಅದೇ ಜಯವನ್ನು ಉಳಿಸಿಕೊಂಡರು. ಮೂರನೇ ಬಾರಿಯೂ ಪ್ರಚಂಡ ಜಯ ಗಳಿಸಿದ ಎನ್.ಎ. ರಾಜ್ಯ ಸಚಿವ ಸಂಪುಟದಲ್ಲಿ ಸೇರಿಕೊಳ್ಳುವರು ಎಂದು ಕಾಸರಗೋಡಿನವರು ಆಗ್ರಹಿಸಿದ್ದರು. ಆದರೆ ಎಡರಂಗಕ್ಕೆ ಆಡಳಿತ ಲಭಿಸಿದ ಹಿನ್ನೆಲೆಯಲ್ಲಿ ಈ ಕನಸು ಕನಸಾಗಿ ಉಳಿಯಿತು.
೧೦ ವರ್ಷದ ಮಧ್ಯಂತರದ ಬಳಿಕ ರಾಜ್ಯದಲ್ಲಿ ಮತ್ತೆ ಆಡಳಿತದ ನಿರೀಕ್ಷೆಯಲ್ಲಿ ಯುಡಿಎಫ್ ಹಾಗೂ ಮುಸ್ಲಿಂ ಲೀಗ್ ಇದೆ. ಮೂರು ಬಾರಿ ಜಯಗಳಿಸಿದ ನೆಲ್ಲಿಕುನ್ನುರಿಗೆ ಇನ್ನೊಂದು ಬಾರಿ ಅವಕಾಶ ನೀಡಲು ಸಾಧ್ಯತೆ ಇಲ್ಲದಿಲ್ಲ. ಇವರಿಗೆ ಅವಕಾಶ ಲಭಿಸದಿದ್ದರೆ ಇವರ ಬಳಿಕ ಯಾರು ಎಂಬ ಪ್ರಶ್ನೆ ಮೂಡಿಬರುತ್ತಿದೆ. ಜಿಲ್ಲೆಯ ಹೊರಗಿನಿಂದಿರುವ ಓರ್ವ ರನ್ನು ಇಲ್ಲಿ ಸ್ಪರ್ಧಿಸುವಂತೆ ಮಾಡಲು ನೇತೃತ್ವ ಯತ್ನಿಸುತ್ತಿದೆ. ವಿಜಯ ಸಾಧ್ಯತೆ ಇರುವ ಒಂದು ಮಂಡಲದಲ್ಲಿ ಹೊರಗಿನಿಂದ ಓರ್ವರನ್ನು ತಂದು ಸ್ಪರ್ಧಿಸಬೇಕಾದ ಅಗತ್ಯವೇನು ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಇದೇ ವೇಳೆ ಹೊರಗಿನ ಅಭ್ಯರ್ಥಿಯಾದರೆ ಅವರ ವಿರುದ್ಧ ಭಿನ್ನಮತೀಯನಾಗಿ ಸ್ಪರ್ಧಿಸುವ ಸಾಧ್ಯತೆಯನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಏನಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಐಕ್ಯರಂಗಕ್ಕೆ ಬಹುಮತ ಲಭಿಸಿದರೆ ಜಿಲ್ಲೆಯಿಂದ ಓರ್ವ ಸಚಿವ ಇರಬಹುದೆಂಬ ಬಗ್ಗೆ ಯುಡಿಎಫ್ ಕಾರ್ಯಕರ್ತರು ಲೆಕ್ಕ ಹಾಕುತ್ತಿದ್ದಾರೆ.







