ಕುಡಿಯುವ ನೀರು ಕ್ಷಾಮ ತೀವ್ರಗೊಂಡ ಸ್ಥಳಗಳಲ್ಲಿ ಕುಡಿಯುವ ನೀರು ವಿತರಣೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಕುಡಿಯುವ ನೀರು ಕ್ಷಾಮ ತೀವ್ರಗೊಳ್ಳುತ್ತಿರುವ  ಹಿನ್ನೆಲೆಯಲ್ಲಿ ಎಲ್ಲಾ ಪ್ರದೇಶಗಳಿಗೂ ಕುಡಿಯುವ ನೀರು ಲಭಿಸುತ್ತದೆಯೇ ಎಂಬುದನ್ನು ಖಚಿತಪಡಿಸಬೇಕೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದರು. ಜಿಲ್ಲಾಧಿಕಾರಿ ಚೇಂಬರ್‌ನಲ್ಲಿ ನಡೆದ ಜಿಲ್ಲಾ ಬರ ಅವಲೋಕನ ಸಭೆಯಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈ ನಿರ್ದೇಶ ನೀಡಿದ್ದಾರೆ. ತೀವ್ರವಾದ ಕುಡಿಯುವ ನೀರು ಕ್ಷಾಮ ಎದುರಿಸುವ ಪ್ರದೇಶಗಳಲ್ಲಿ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಲಭ್ಯಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಇಲಾಖೆಯ ಜೋಯಿಂಟ್ ಡೈರೆಕ್ಟರ್‌ಗೆ ಹೊಣೆ ನೀಡಲಾಗಿದೆ. ವಿದ್ಯುತ್  ವಿತರಣೆಯಲ್ಲಿನ ತಡೆಯನ್ನು ಪರಿಹರಿಸಿ ಬಾವಿಕ್ಕರೆ ಯೋಜನೆಯ ಕುಡಿಯುವ ನೀರು ವಿತರಣೆ ಸರಿಯಾದ ರೀತಿಯಲ್ಲಿ ಕೂಡಲೇ ಆರಂಭಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಕೇರಳ ಜಲ ಪ್ರಾಧಿಕಾರದ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ಈ ಬಗ್ಗೆ ನಿರ್ದೇಶ ನೀಡಲಾಗಿದೆ.

ಉನ್ನತಿಗಳಲ್ಲಿ ಕುಡಿಯುವ ನೀರು ಖಚಿತಪಡಿಸಬೇಕೆಂದು ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶ ನೀಡಲಾಯಿತು. ಶೈಕ್ಷಣಿಕ ವರ್ಷದ ಆರಂಭಕ್ಕೆ ಮುಂಚಿತವಾಗಿಯೇ ಶಾಲಾ ಕಟ್ಟಡಗಳ ಫಿಟ್ನೆಸ್ ಪರಿಶೀಲಿಸಿ ದುರಸ್ತಿ ಕೆಲಸಗಳನ್ನು ಸಮಯಾನುಸಾರ ಪೂರ್ತಿಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರದ ಅಂಗವಾಗಿ ರುವ ವಿವಿಧ ಇಲಾಖೆಗಳನ್ನು ಸಂಯೋ ಜಿಸಿಕೊಂಡು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷಾ ಕ್ರಮಗಳನ್ನು ಊರ್ಜಿತಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರಗಿದ ಅವಲೋಕನ ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚಿನ ಪಂಚಾಯತ್ ಗಳಲ್ಲೂ ಕುಡಿಯುವ ನೀರು ವಿತರಣೆ ಆರಂಭಿಸಲಾಗಿದ್ದರೂ ತಾಂತ್ರಿಕ ಸಮಸ್ಯೆ ಗಳಿಂದಾಗಿ ವಿತರಣೆ ಮೊಟಕುಗೊಂಡ ಸ್ಥಳಗಳಲ್ಲಿ ತುರ್ತು ಪರಿಹಾರ ಕಂಡು ಕೊಳ್ಳಲು ಜಿಲ್ಲಾಧಿಕರಿ ನಿರ್ದೇಶಿಸಿದರು.

ಜಿಲ್ಲೆಯ ಭೂಗರ್ಭ ಜಲಮಟ್ಟ ಗಣನೀಯವಾಗಿ ಕುಸಿತ ದಾಖಲಿಸಿದ ಹಿನ್ನೆಲೆಯಲ್ಲಿ ಜಲಮೂಲಗಳ ಸಂರಕ್ಷಣೆಗೆ ಪ್ರತ್ಯೇಕ ಗಮನ ನೀಡಬೇಕು. ವಿದ್ಯಾನಗರ ಒಳಗೊಂಡ ವಲಯಗಳ ಪಂಪಿಂಗ್ ಸಮಸ್ಯೆಗಳನ್ನು ಪರಿಹರಿಸಲು ಕೆಎಸ್‌ಇಬಿ, ಜಲ ಪ್ರಾಧಿಕಾರದ ಅಧಿಕಾರಿಗಳು ಒಂದಾಗಿ ಕಾರ್ಯಾಚರಿಸಬೇಕೆಂದು ಅವರು ಸೂಚಿಸಿದರು. ಹಾನಿಗೊಂಡ ಕೇಬಲ್‌ಗಳು, ವಾಲ್ವ್‌ಗಳನ್ನು ತುರ್ತಾಗಿ ಬದಲಿಸಲು ಜಿಲ್ಲಾಧಿಕಾರಿ ಆದೇಶಿಸಿದರು. ಸೂರ್ಯತಾಪ ಸಾಧ್ಯತೆ  ಗಣನೆಗೆ ತೆಗೆದು ಕಾರ್ಮಿಕರ ಮಧ್ಯೆ ತಿಳುವಳಿಕೆ ಮೂಡಿಸಲು ಯತ್ನಿಸಬೇಕು, ವಾರ್ಡ್ ಮಟ್ಟದಲ್ಲಿ ಆರ್‌ಆರ್‌ಟಿ ಗ್ರೂಪ್‌ಗಳ ಮೂಲಕ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಹೊರ ಪ್ರದೇಶಗಳಲ್ಲಿ ಕೆಲಸದಲ್ಲಿ ಏರ್ಪಟ್ಟಿರುವವರಿಗೆ ಸೂಕ್ತವಾದ ಮಾರ್ಗ ನಿರ್ದೇಶಗಳನ್ನು ನೀಡಬೇಕು. ಆಸ್ಪತ್ರೆಗಳಲ್ಲಿ ಅಗತ್ಯದ ಔಷಧಿಗಳ ಲಭ್ಯತೆ ಖಚಿತಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಡೆಪ್ಯುಟಿ ಡಿಎಂಒ ತಿಳಿಸಿದರು. ಈ ಬಗ್ಗೆ ನಡೆದ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ ಕೆ.ವಿ. ಶ್ರುತಿ, ಡೆಪ್ಯುಟಿ ಡಿಎಂಒ ಅಜಯ್ ಕೆ. ರಾಜ್, ಸ್ಥಳೀಯಾಡಳಿತ ಇಲಾಖೆ ಜೋಯಿಂಟ್ ಡೈರೆಕ್ಟರ್ ಜೈಸನ್ ಮ್ಯಾಥ್ಯು, ಪಿ. ರಾಘವೇಂದ್ರ, ಕೆ. ಮೂಸ, ಎಂ. ಸುನಿಲ್ ಕುಮಾರ್, ಜೋಸ್ ಮ್ಯಾಥ್ಯು, ಕೆ.ವಿ. ರಾಘವನ್ ಮಾತನಾಡಿದರು. ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದರು.

District
RELATED NEWS

You cannot copy contents of this page