ಕಾಸರಗೋಡು: ಡಿಜಿಟಲ್ ಅರೆಸ್ಟ್ನ ಬೆದರಿಕೆಯೊಡ್ಡಿ 80ರ ಹರೆಯದ ವೈದ್ಯರಿಂದ 1.19 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಎಗರಿಸಿದ ಪ್ರಕಣದ ಆರೋಪಿಯನ್ನು ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಸರಗೋಡು ಸೈಬರ್ ಪೊಲೀಸರ ತಂಡ ಬಂಧಿಸಿದೆ.
ವಿದೇಶದಲ್ಲಿ ದುಡಿಯುತ್ತಿರುವ ಮಲಪ್ಪುರಂ ಮಲಟ್ಟೂರು ಎಡಯಾಟ್ಟೂರು ಚುರಕುತ್ ಹೌಸ್ನ ಶಮದ್ ಚುರಕುತ್ತ್ (34) ಬಂಧಿತ ಆರೋಪಿ.
ನೀಲೇಶ್ವರ ನಿವಾಸಿಯಾಗಿರುವ ೮೦ರ ಹರೆಯದ ವೈದ್ಯರನ್ನು ಫೋನ್ ಹಾಗೂ ವೀಡಿಯೋ ಕಾಲ್ ಮೂಲಕ ಸಂಪರ್ಕಿಸಿ ಅವರಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿ 2025 ನವಂಬರ್ 24ರಿಂದ ಡಿಸೆಂಬರ್ 17ರ ನಡುವಿನ ಅವಧಿಯಲ್ಲಿ ಅವರ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ಎಗರಿಸಿದ ಬಗ್ಗೆ ವೈದ್ಯರು ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನಾನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ವಿಭಾಗದ ಅಧಿಕಾರಿಯಾಗಿ ದ್ದೇನೆಂಬ ಹೆಸರಲ್ಲಿ ಆರೋಪಿ ಈ ವೈದ್ಯರನ್ನು ಸಂಪರ್ಕಿಸಿ ನೀವು ಕಾಳಧನ ಬಿಳುಪುಗೊಳಿಸುವ ಯತ್ನದಲ್ಲಿ ತೊಡಗಿರುವುದಾಗಿ ಮಾಹಿತಿ ಲಭಿಸಿದೆ. ಅದರಿಂದಾಗಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಆರೋಪಿ ತಿಳಿಸಿ ಅದರ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿದ್ದನು. ಡಿಜಿಟಲ್ ಅರೆಸ್ಟ್ ಕ್ರಮವನ್ನು ಹೊರತುಪಡಿಸಲು ಆ ಬಗ್ಗೆ ರಿಸರ್ವ್ ಬ್ಯಾಂಕ್ನ ಪರಿಶೀಲನೆಗಾಗಿ ಹಣ ನೀಡಬೇಕೆಂದು ನಂಬಿಸಿ ಅದರ ಹೆಸರಲ್ಲಿ ವೈದ್ಯರ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟಾರೆಯಾಗಿ 1,19,35,000 ರೂಪಾಯಿ ಆತ ಲಪಟಾಯಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯ ಬ್ಯಾಂಕ್ ಖಾತೆಯಲ್ಲಿ 46.25 ಲಕ್ಷ ರೂ. ಪತ್ತೆಯಾಗಿದೆ. ಮಾತ್ರವಲ್ಲ ಬೇರೊಂದು ಬ್ಯಾಂಕ್ ಖಾತೆಯಲ್ಲಿ 9.60 ಲಕ್ಷ ರೂ. ಕೂಡಾ ಪತ್ತೆಯಾಗಿದೆ. ತನ್ನ ಬ್ಯಾಂಕ್ ಖಾತೆಗೆ ಬಂದ ಹಣವನ್ನು ಆರೋಪಿ ಚೆಕ್ ಮೂಲಕ ಹಿಂಪಡೆದಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.
ಈ ವಂಚನೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆರೋ ಪಿ ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸ್ಪಷ್ಟಗೊಂಡಿತ್ತು. ಅದರಂತೆ ಪೊಲೀಸರು ಆತನ ಪಾಸ್ಪೋರ್ಟ್ನ ಪೂರ್ಣ ಮಾಹಿತಿಗಳನ್ನು ಸಂಗ್ರಹಿಸಿ ಆತನ ಬಂಧನಕ್ಕಾಗಿ ಲುಕೌಟ್ ನೋಟೀಸು ಜ್ಯಾರಿಗೊಳಿಸಿದ್ದರು. ಈ ಮಧ್ಯೆ ಆರೋಪಿ ಊರಿಗೆ ಹಿಂತಿರುಗಲೆಂದು ವಿದೇಶದಿಂದ ಸೆಪ್ಟಂಬರ್ 17ರಂದು ವಿಮಾನದಲ್ಲಿ ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿನ ಎಮಿಗ್ರೇಷನ್ ಅಧಿಕಾರಿಗಳು ತಡೆದು ನಿಲ್ಲಿಸಿ ಕಾಸರಗೋಡು ಸೈಬರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಪಿ. ನಿಧಿನ್ ರಾಜ್ರ ಮೇಲ್ನೋಟದಲ್ಲಿ ಕಾಸರ ಗೋಡು ಸೈಬರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ. ರಾಜೀವ್ ರ ನಿರ್ದೇಶ ಪ್ರಕಾರ ಎಸ್ಐ ನೌಶಾದ್, ಎಎಸ್ಐಗಳಾದ ರಂಜಿತ್ ಕುಮಾರ್, ದಿಲೀಶ್ ಮತ್ತು ವಿಪಿನ್ರನ್ನೊಳಗೊಂಡ ಪೊಲೀಸರ ತಂಡ ಹೈದರಾಬಾದ್ಗೆ ತೆರಳಿ ಆರೋಪಿಯನ್ನು ವಶಕ್ಕೆ ತೆಗೆದು ಕಾಸರಗೋಡಿಗೆ ಕರೆತಂದ ಬಳಿಕ ಆತನ ಬಂಧನ ದಾಖಲಿಸಿಕೊಂಡರು. ಬಂಧಿತ ನನ್ನು ನಂತರ ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲ ಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಲಯ ನಿರ್ದೇಶ ಪ್ರಕಾರ ಆತನನ್ನು ನ್ಯಾಯಾಂಗ ಬಂಧನ ದಾಖಲಿಸಲಾಯಿತು.






