ಮುಂದುವರಿದ ಮಾದಕದ್ರವ್ಯ ಬೇಟೆ: ಎಂಡಿಎಂಎ, ಹೈಬ್ರೀಡ್ ಗಾಂಜಾ ಪತ್ತೆ; ನಾಲ್ವರ ಸೆರೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ  ಗಾಂಜಾ ಇತ್ಯಾದಿ ಮಾದಕದ್ರವ್ಯ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದು,  ನಿನ್ನೆ ಮೂರೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಮತ್ತು ಹೈಬ್ರೀಡ್ ಗಾಂಜಾ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾನಗರ ಪೊಲೀಸ್ ಮತ್ತು ಎಸ್‌ಪಿಯ ಮಾದಕದ್ರವ್ಯ ವಿರುದ್ಧ ಸ್ಕ್ವಾಡ್ ಉಳಿಯತ್ತಡ್ಕಕ್ಕೆ ಸಮೀಪದ ಇಜ್ಜತ್‌ನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 6 ಗ್ರಾಂ ಎಂಡಿಎಂಎ ಮತ್ತು 6 ಗ್ರಾಂ ಹೈಬ್ರೀಡ್ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದು ಕೊಂಡಿದೆ. ಇದಕ್ಕೆ ಸಂಬಂಧಿಸಿ ಉಳಿ ಯತ್ತಡ್ಕ ಗಣೇಶನಗರದ ಮುಹಮ್ಮದ್ ಹನೀಫಾ (34) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಹೊಸದುರ್ಗ ಪೊಲೀಸರು ಹೊಸದುರ್ಗ ಮುರಿಯನಾವಿಲ್‌ನ ಶಾಜಹಾನ್ ಅಬೂಬಕ್ಕರ್ (41) ಎಂಬಾತನ ಮನೆಯಲ್ಲಿ ನಡೆಸಿದ ದಾಳಿ ಮತ್ತು ತಪಾಸಣೆಯಲ್ಲಿ  ಸ್ನಾನದ ಕೊಠಡಿಯಲ್ಲಿ ಬಚ್ಚಿಡಲಾಗಿದ್ದ ಮೂರು ಗ್ರಾಂ ಎಂಡಿಎಂಎ ಪತ್ತೆಹಚ್ಚಿದ್ದು, ಈತ ನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.

ಬೇಕಲ ಪೊಲೀಸರು ನಿನ್ನೆ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ  ಸಮೀಪದ ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ 1.95  ಗ್ರಾಂ ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಪಯ್ಯನ್ನೂರು ರಾಮಂತಳಿ ಕುನ್ನಾರ ನಿವಾಸಿಗಳಾದ ಎಂ. ಪ್ರಜಿತ್ (33), ಟಿ. ಸಜಿತ್ (36) ಎಂಬವರು ಬಂಧಿತ ಆರೋಪಿಗಳು.

ರಿಬಾಗಿಲುನಲ್ಲಿ ಕಾಸರಗೋಡು ಪೊಲೀಸರು ಮೊನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೨೮.೩೨ ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ನಿನ್ನೆ ವಿದ್ಯಾನಗರ, ಬೇಕಲ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಾಗಿ ಈ ಮೂರು ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಎಎಸ್‌ಪಿ ಡಾ. ಎಂ. ನಂದಕುಮಾರ್, ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್, ಹೊಸದುರ್ಗ ಡಿವೈಎಸ್‌ಪಿ ಸುರೇಶ್ ಬಾಬುರ ಮೇಲ್ನೋಟದಲ್ಲಿ ವಿದ್ಯಾನಗರ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್, ಕಾಸರಗೋಡು ಇನ್ಸ್‌ಪೆಕ್ಟರ್ ಪಿ. ನಳಿನಾಕ್ಷನ್ ಹೊಸದುರ್ಗ ಇ. ಅನೂಬ್ ಕುಮಾರ್, ಬೇಕಲ ಇನ್ಸ್‌ಪೆಕ್ಟರ್ ರಂಜಿತ್ ರವೀಂದ್ರನ್ ಎಂಬವರನ್ನೊಳಗೊಂಡ ಪೊಲೀಸರ ತಂಡ  ಕಾರ್ಯಾಚರಣೆ ನಡೆಸಿದೆ.

You cannot copy contents of this page