ಕುಂಬಳೆ: ಚುನಾವಣೆಯ ಕಾವು ತುತ್ತತುದಿಗೇರಿದ ಪ್ರಚಾರ ಮುಕ್ತಾಯ ಸಮಯದಲ್ಲಿ ಜನಸಮೂಹದ ಮಧ್ಯೆ ಕಾವಿಯುಟ್ಟು ತಲೆಯಲ್ಲಿ ಮುಟ್ಟಾಳೆ ಧರಿಸಿ ನೋಟೀಸ್ಗಳೊಂದಿಗೆ ನಡೆಯುತ್ತಿದ್ದ ವ್ಯಕ್ತಿ ನೋಡುಗರಿಗೆ ಕೌತುಕ ಮೂಡಿಸಿದರು. ಪಕ್ಕನೆ ಹಲವರಿಗೆ ಈ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಲಿಲ್ಲ. ಪರೀಕ್ಷಿಸಿ ನೋಡಿದಾಗ ಆ ವ್ಯಕ್ತಿ ನೀಡಿದ ನೋಟೀಸನ್ನು ಪಡೆದು ಓದಿದಾಗ ಮತದಾರರಿಗೆ ಆ ವ್ಯಕ್ತಿಯ ಗುರುತು ಲಭಿಸಿತು. ಈ ವೇಳೆ ಅವರು ಹಾಂ ಇದು ನಮ್ಮ ೨೪ನೇ ವಾರ್ಡ್ನ ಸ್ವತಂತ್ರ ಅಭ್ಯರ್ಥಿ ಕೇಶವ ನಾಯಕ್ ಅಲ್ಲವೇ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಮತ್ತೆ ಕೆಲವರು ತಮ್ಮ ಮೂಗಿಗೆ ಬೆರಳಿರಿಸಿದರು. ಈ ಮಧ್ಯೆ ಸುತ್ತುವರಿದವರಿಗೆ ಕೇಶವ ನಾಯಕ್ ತನ್ನ ವಿನಂತಿ ಪತ್ರವನ್ನು ನೀಡಿ ಮತ ಯಾಚಿಸಿದರು.
ಯುಡಿಎಫ್ ಹಾಗೂ ಬಿಜೆಪಿಯ ಪ್ರಚಾರಮುಕ್ತಾಯಕ್ಕೆ ಬಂದು ತಲುಪಿದ ಕಾರ್ಯಕರ್ತರಿಗೆಲ್ಲ ಸ್ವತಂತ್ರ ಅಭ್ಯರ್ಥಿ ವಿನಂತಿ ಪತ್ರವನ್ನು ಹಸ್ತಾಂತರಿಸಿದರು. ಈ ಮಧ್ಯೆ ಪ್ರಚಾರ ಮುಕ್ತಾಯದ ಕಾವನ್ನು ಆವೇಶಭರಿತಗೊಳಿಸಲು ಯುಡಿಎಫ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸಾಧ್ಯವಾಗಲಿಲ್ಲ. ಪೊಲೀಸರ ನಿಯಂತ್ರಣದಿಂದ ಇದು ಸಾಧ್ಯವಾಗದೆ ಕೋರ್ನರ್ ಸಭೆಗಳನ್ನು ನಡೆಸಿ ಅವರು ಹಿಂತಿರುಗಿದರು.
ಸಿಪಿಎಂ ಚುನಾವಣಾ ಪ್ರಚಾರ ಅಂತ್ಯ ಕಾರ್ಯಕ್ರಮ ಬೇಡವೆಂದು ತೀರ್ಮಾನಿಸಿತ್ತು. ಯುಡಿಎಫ್ ಒಕ್ಕೂಟದಲ್ಲಿ ಮಂಡಲ ಕಾರ್ಯದರ್ಶಿ ಹಾಗೂ ಅಭ್ಯರ್ಥಿಯಾದ ಎ.ಕೆ. ಆರಿಫ್ ಮಾತನಾಡಿದರು.







