ವಸತಿಗೃಹದಲ್ಲಿ ತಿಗಣೆ ಕಡಿತ: ಕುಟುಂಬಕ್ಕೆ 30,000 ರೂ. ದಂಡ

ಕಾಸರಗೋಡು: ವಸತಿಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದ ಕುಟುಂಬ ತಿಗಣೆಗಳ ಕಡಿತಕ್ಕೊಳಗಾದ ದೂರಿನಂತೆ ಪ್ರಸ್ತುತ ವಸತಿಗೃಹದವರು ಆ ಕುಟುಂಬಕ್ಕೆ 30,000 ರೂ. ನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಿ ಕಾಸರಗೋಡು ಗ್ರಾಹಕರ ದೂರು ಪರಿಹಾರ ಆಯೋಗ ತೀರ್ಪು ನೀಡಿದೆ.

ಇದರಂತೆ ಚೆರುವತ್ತೂರಿನ ವಾಸುದೇವ ಕೊಣ್ಣುರಾಯರ ಕುಟುಂಬಕ್ಕೆ ತಿರುವನಂತಪುರದ ರೂಪ್ ಮಹಲ್ ಎಂಬ ಹೆಸರಿನ ವಸತಿಗೃಹ ಈ ನಷ್ಟ ಪರಿಹಾರ ನೀಡಬೇಕಾಗಿದೆ. ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದರ್ಶನ ಹಾಗೂ ಸಂಬಂಧಿಕರೋರ್ವರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು 2024 ಆಗಸ್ಟ್ 26ರಂದು ವಾಸುದೇವ ಮತ್ತು ಅವರ ಕುಟುಂಬದವರು ತಿರುವನಂತಪುರಕ್ಕೆ ಹೋಗಿದ್ದರು. ಅಂದು ಆ ಕುಟುಂಬ ತಿರುವನಂತಪುರದ ರೂಪ್ ಮಹಲ್ ವಸತಿಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದರು. ಅದು 3500 ರೂ. ಬಾಡಿಗೆಯ ಹವಾನಿಯಂತ್ರಿತ ಡಬಲ್ ಬೆಡ್ ಹೊಂದಿದ್ದ ಕೊಠಡಿಯಾಗಿತ್ತು. ಆದರೆ ರಾತ್ರಿ ಹಾಸಿಗೆಯಲ್ಲಿ ಮಲಗಿದಾಗ ತಿಗಣೆಗಳ ಕಡಿತದಿಂದಾಗಿ ಆ ಕುಟುಂಬದವರಿಗೆ ನಿದ್ರೆ ಬರದಂತಾಯಿತು. ಜತೆಗಿದ್ದ ಪುಟ್ಟ ಮಗು ಕೂಡಾ ತಿಗಣೆಗಳ ತೀವ್ರ ಕಡಿತಕ್ಕೊಳಗಾಯಿತು. ಕಡಿತ ಸಹಿಸಲಾಗದೆ ಆ ವಿಷಯವನ್ನು ಆ ಕುಟುಂಬದವರು ವಸತಿ ಗೃಹದ ರಿಸೆಪ್ಶನಿಸ್ಟ್‌ಗೂ ತಿಳಿಸಿದರಲ್ಲದೆ, ಮರುದಿನ ತಿರುವನಂತಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯನ್ನೂ ಪಡೆಯಬೇಕಾಗಿ ಬಂತು. ಬಳಿಕ ವಾಸುದೇವನವರು ಆ ಬಗ್ಗೆ ಕಾಸರಗೋಡು ಗ್ರಾಹಕರ ದೂರು ಪರಿಹಾರ ಆಯೋಗಕ್ಕೆ ದೂರು ನೀಡಿದರು.

ಆಗ ಈ ಪ್ರಕರಣದ ವಿಚಾರಣೆಯನ್ನು ಕಾಸರಗೋಡಿನ ಬದಲು ತಿರುವನಂತಪುರದ ಗ್ರಾಹಕರ ದೂರು ಪರಿಹಾರ ಆಯೋಗಕ್ಕೆ ವರ್ಗಾಯಿಸಬೇಕೆಂದು ಆ ವಸತಿ ಗೃಹದ ಮಾಲಕರು ವಿನಂತಿಸಿಕೊಂಡರೂ ಆಯೋಗ ಆ ಬೇಡಿಕೆಯನ್ನು ಅಂಗೀಕರಿಸಲಿಲ್ಲ. ಮಾತ್ರವಲ್ಲದೆ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಕೊನೆಗೆ ವಾಸುದೇವರ ಕುಟುಂಬಕ್ಕೆ 15,೦೦೦ ರೂ. ನಷ್ಟ ಪರಿಹಾರ, ಚಿಕಿತ್ಸಾ ವೆಚ್ಚ ವತಿಯಿಂದ 10,೦೦೦ ರೂ. ಹಾಗೂ ನ್ಯಾಯಾಲಯದ ವೆಚ್ಚದ ರೂಪದಲ್ಲಿ 5೦೦೦ ರೂ. ಸೇರಿದಂತೆ ಒಟ್ಟು 30,೦೦೦ ರೂ. ನಷ್ಟ ಪರಿಹಾರ ನೀಡುವಂತೆ ಕೊನೆಗೆ ತೀರ್ಪು ನೀಡಿದೆ. ಒಂದು ತಿಂಗಳೊಳಗಾಗಿ ಈ ನಷ್ಟ ಪರಿಹಾರ ನೀಡುವಂತೆ ಆಯೋಗ ತೀರ್ಪಿನಲ್ಲಿ ತಿಳಿಸಿದೆ. ಆದರೆ ನಮ್ಮ ವಸತಿ ಗೃಹದಲ್ಲಿ ತಿಗಣೆ ಕಾಟ ಉಂಟಾದ ಬಗ್ಗೆ ಈ ತನಕ ಯಾರಿಂದಲೂ ದೂರು ಉಂಟಾಗಿಲ್ಲವೆಂಬ ವಾದವನ್ನು ಪ್ರಸ್ತುತ ವಸತಿಗೃಹದವರು ಮುಂದಿರಿಸಿದ್ದಾರೆ.

RELATED NEWS

You cannot copy contents of this page